ನವದೆಹಲಿ: ಭಾರತೀಯ ಅಧಿಕಾರಿಗಳಿಗೆ ಲಂಚ ನೀಡಿದ ಪ್ರಕರಣ ಸಂಬಂಧ ಉದ್ಯಮಿ ಗೌತಮ್ ಅದಾನಿ ಹಾಗೂ ಅವರ ಅಣ್ಣನ ಮಗ ಸಾಗರ್ ಅದಾನಿ ವಿರುದ್ಧ ಅಮೆರಿಕದ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಲಾಗಿದೆ. ಇದರ ಬೆನ್ನಲ್ಲೇ, ಅವರ ಬಂಧನಕ್ಕೆ ಕೋರ್ಟ್ ವಾರಂಟ್ ಹೊರಡಿಸಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಜಗನ್ ಮೋಹನ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆಂಧ್ರಪ್ರದೇಶದ ಉನ್ನತ ಅಧಿಕಾರಿಯೊಬ್ಬರಿಗೆ ಲಂಚದ ಹೆಚ್ಚಿನ ಭಾಗವನ್ನು ನೀಡಲಾಗಿತ್ತು ಎಂದು ಗೌತಮ್ ಅದಾನಿ ವಿರುದ್ಧದ ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಿರುವಂತೆಯೇ ರಾಜಕೀಯ ವಲಯದಲ್ಲಿ ವಾಕ್ಸಮರವೂ ಜೋರಾಗಿದೆ.
ಪ್ರಸ್ತುತ ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಪ್ರಮುಖ ಮಿತ್ರ ಪಕ್ಷವಾಗಿರುವ ತೆಲುಗು ದೇಶಂ ಪಕ್ಷ (ಟಿಡಿಪಿ) ಆಂಧ್ರಪ್ರದೇಶದಲ್ಲಿ ಆಡಳಿತ ನಡೆಸುತ್ತಿದೆ. ಜತೆಗೆ, ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ಸಂಭವನೀಯ ಹೂಡಿಕೆಗಳ ಕುರಿತು ಅದಾನಿ ಸಮೂಹದ ನಿಯೋಗದೊಂದಿಗೆ ಸಭೆ ನಡೆಸಿದ್ದರು.
ವಿಶಾಖಪಟ್ಟಣದಲ್ಲಿ ಅದಾನಿ ಸಮೂಹದ ಉದ್ದೇಶಿತ ಡೇಟಾ ಸೆಂಟರ್ ಸ್ಥಾಪನೆ ಮಾತುಕತೆ ಹಂತದಲ್ಲಿದೆ. ಜತೆಗೆ, ಅದಾನಿ ಸಮೂಹ ರಾಜ್ಯದ ನೆಲ್ಲೂರಿನ ಕೃಷ್ಣಪಟ್ಟಣಂ ಮತ್ತು ಅನಕಪಲ್ಲಿ ಜಿಲ್ಲೆಯ ಗಂಗವರಂ ಜಿಲ್ಲೆಗಳಲ್ಲಿ ಎರಡು ಬಂದರುಗಳನ್ನು ಹೊಂದಿದೆ.
ಇದೀಗ ಗೌತಮ್ ಅದಾನಿ ವಿರುದ್ಧ ಬಂಧನ ವಾರಂಟ್ ಜಾರಿಯಾಗಿರುವ ಕುರಿತು ಪ್ರತಿಕ್ರಿಯಿಸಿರುವ ಟಿಡಿಪಿ ನಾಯಕರೊಬ್ಬರು, ‘ಬಹುಶಃ ನಮ್ಮ ನಾಯಕರು (ಟಿಡಿಪಿ) ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವುದನ್ನು ಗಮನದಲ್ಲಿಟ್ಟುಕೊಂಡು ತಕ್ಷಣ ಪ್ರತಿಕ್ರಿಯಿಸಲು ಬಯಸುತ್ತಿಲ್ಲ. ಪ್ರಕರಣ ಸಂಬಂಧ ಸಂಪೂರ್ಣ ಮಾಹಿತಿ ಪಡೆಯಲಾಗುವುದು’ ಎಂದು ಹೇಳಿದ್ದಾರೆ.
ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕದ ಕೋರ್ಟ್ ಬಂಧನದ ವಾರಂಟ್ ಹೊರಡಿಸಿರುವ ಬೆನ್ನಲ್ಲೇ ಅದಾನಿ ಸಮೂಹದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ತೆಲಂಗಾಣದಲ್ಲಿ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕೆಲ ತಿಂಗಳ ಹಿಂದೆ ಗೌತಮ್ ಅದಾನಿ ಪುತ್ರ ಕರಣ್ ಅದಾನಿ ಅವರನ್ನು ರೇವಂತ್ ರೆಡ್ಡಿ ಭೇಟಿ ಮಾಡಿದ್ದು ತೆಲಂಗಾಣದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿತ್ತು.
ಜನವರಿಯಲ್ಲಿ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ತೆಲಂಗಾಣದಲ್ಲಿ ಅದಾನಿ ಸಮೂಹದ ಕಂಪನಿಗಳು ₹12,400 ಕೋಟಿಗೂ ಹೆಚ್ಚು ಹಣವನ್ನು ಹೂಡಿಕೆ ಮಾಡುವುದಾಗಿ ಘೋಷಿಸಿ, ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.