ADVERTISEMENT

ಭಾರತೀಯ ಆಟಗಾರರಲ್ಲಿ ದೇಶಕ್ಕಾಗಿ ಆಡುವ ಉತ್ಸಾಹ ಕಾಣುತ್ತಿಲ್ಲ: ಮದನ್‌ ಲಾಲ್

ಒಂದು ವೇಳೆ ಆಟಗಾರರಿಗೆ ವಿಶ್ರಾಂತಿ ಬೇಕು ಎಂದರೆ, ಐಪಿಎಲ್‌ ವೇಳೆಯಲ್ಲಿ ತೆಗೆದುಕೊಳ್ಳಲಿ: ಲಾಲ್ ಕಿಡಿಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಡಿಸೆಂಬರ್ 2022, 6:53 IST
Last Updated 9 ಡಿಸೆಂಬರ್ 2022, 6:53 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಬಾಂಗ್ಲಾದೇಶ ತಂಡದ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡದ ಹೀನಾಯ ಪ್ರದರ್ಶನಕ್ಕೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿದೆ. ಭಾರತ ತಂಡದ ಸದಸ್ಯರಲ್ಲಿ ‘ಗಂಭೀರತೆ ಹಾಗೂ ಉತ್ಸಾಹ‘ ಕಾಣುತ್ತಿಲ್ಲ ಎಂದು ಮಾಜಿ ಕ್ರಿಕೆಟಿಗ ಮದನ್‌ ಲಾಲ್‌ ಹೇಳಿದ್ದಾರೆ.

ಬುಧವಾರ ನಡೆದ ಏಕದಿನ ಸರಣಿಯ ಎರಡನೇ ಪ‍ಂದ್ಯದಲ್ಲೂ ಭಾರತ ಸೋಲನುಭವಿಸಿದ್ದು, ಒಂದು ಪಂದ್ಯ ಬಾಕಿ ಉಳಿದಿರುವಂತೆ 2–0ರ ಅಂತರದಿಂದ ಸರಣಿಯನ್ನು ಕೈಚೆಲ್ಲಿದೆ. ಇದರ ಬೆನ್ನಲ್ಲೇ ಮದನ್‌ ಲಾಲ್‌ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

‘ಖಂಡಿತವಾಗಿಯೂ, ಭಾರತ ತಂಡ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ. ತಂಡದಲ್ಲಿ ಗಾಂಭೀರ್ಯತೆ ಕಾಣಿಸುತ್ತಿಲ್ಲ. ಕಳೆದೆರಡು ವರ್ಷಗಳಿಂದ ಆಟಗಾರರಲ್ಲಿ ‘ಜೋಶ್‌‘ ಅನ್ನು ನಾನು ಕಂಡೇ ಇಲ್ಲ‘ ಎಂದು ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ADVERTISEMENT

‘ಇದು ಭಾರತೀಯ ತಂಡದ ಹಾಗೆ ಕಾಣಿಸುತ್ತಲೇ ಇಲ್ಲ. ದೇಶಕ್ಕಾಗಿ ಆಟವಾಡುತ್ತಿದ್ದೇವೆ ಎನ್ನುವ ಉಮೇದು ಇಲ್ಲ. ಆಟಗಾರರ ದೇಹ ದಣಿದಿದೆ. ಅವರು ಕೇವಲ ಆಡುತ್ತಿದ್ದಾರೆ ಅಷ್ಟೇ. ಇದು ಬಹಳ ಗಂಭೀರ ವಿಷಯ‘ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ತಂಡದ ಹಲವು ಸದಸ್ಯರು ಫಿಟ್‌ ಆಗಿಲ್ಲ ಎನ್ನುವ ನಾಯಕ ರೋಹಿತ್‌ ಶರ್ಮಾ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ‘ದೇಶಕ್ಕಾಗಿ ಆಡುವಾಗ ಪರಿಪೂರ್ಣ ಫಿಟ್‌ ಇಲ್ಲದೆ ಬರಲೇಬಾರದು‘ ಎಂದು ಅವರು ಹೇಳಿದ್ದಾರೆ.

‘ತಂಡದಲ್ಲಿ ಎಲ್ಲೋ ತಪ್ಪಾಗಿದೆ ಎಂದು ನಾಯಕನೇ ಹೇಳುತ್ತಾನೆ. ಇದಕ್ಕೆ ಯಾರು ಹೊಣೆ? ಇದಕ್ಕೆ ತರಬೇತುದಾರರು ಕಾರಣರೇ? ಫಿಟ್ನೆಸ್‌ ಇಲ್ಲದವರು ಯಾಕೆ ಆಟವಾಡಬೇಕು? ನೀವು ಅಂತರರಾಷ್ಟ್ರೀಯ ಕ್ರಿಕೆಟ್‌ ಆಟವಾಡುತ್ತಿದ್ದೀರಿ. ಫಲಿತಾಂಶಗಳು ನಿಮ್ಮ ಮುಂದೆಯೇ ಇದೆ‘ ಎಂದು ಅವರು ಅಸಮಾಧಾನಿತರಾಗಿದ್ದಾರೆ.

‘ಒಂದು ವೇಳೆ ಆಟಗಾರರಿಗೆ ವಿಶ್ರಾಂತಿ ಬೇಕು ಎಂದರೆ, ಐಪಿಎಲ್‌ ವೇಳೆಯಲ್ಲಿ ತೆಗೆದುಕೊಳ್ಳಲಿ. ದೇಶ ಮೊದಲು. ಐಸಿಸಿ ಟ್ರೋಫಿಗಳನ್ನು ಗೆಲ್ಲಲು ಆಗುತ್ತಿಲ್ಲವೆಂದರೆ, ನಿಮ್ಮ ರಾಷ್ಟ್ರದ ಕ್ರಿಕೆಟ್‌ ಕುಸಿಯುತ್ತಿದೆ ಎಂದರ್ಥ‘ ಎಂದು ಲಾಲ್‌ ಹೇಳಿದ್ದಾರೆ.

ಭಾರತದ ಆರಂಭಿಕ ಆಟಗಾರರ ಪ್ರದರ್ಶನದ ಬಗ್ಗೆ ಟೀಕೆ ಮಾಡಿರುವ ಅವರು, ‘ಕಳೆದ ಮೂರು ವರ್ಷಗಳಲ್ಲಿ ಹಿರಿಯ ಆಟಗಾರರು ಎಷ್ಟು ಶತಕ ಬಾರಿಸಿದ್ದಾರೆ? ಒಂದು ವರ್ಷದಲ್ಲಿ ಎಷ್ಟು ಶತಕ ಬಾರಿಸಿದ್ದಾರೆ. ನಿಮಗೆ ವಯಸ್ಸಾದಂತೆ ಕಣ್ಣು ಹಾಗೂ ಕೈ ನಡುವಣ ಸಮನ್ವಯ ತಪ್ಪಿಹೋಗುತ್ತದೆ. ಹಿರಿಯ ಆಟಗಾರರು ಉತ್ತಮ ಪ್ರದರ್ಶನ ನೀಡಬೇಕು. ಆರಂಭಿಕ ಆಟಗಾರರು ಪ್ರದರ್ಶನ ನೀಡದೇ ಹೋದರೆ ಗೆಲ್ಲಲು ಸಾಧ್ಯವಿಲ್ಲ‘ ಎಂದು ಅವರು ಹೇಳಿದ್ದಾರೆ.

ಕೆಟ್ಟ ಬೌಲಿಂಗ್ ಪ್ರದರ್ಶನದ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿರುವ ಅವರು, ‘ಬೌಲರ್‌ಗಳಲ್ಲಿ ಗಾಂಭೀರ್ಯ ಕಾಣುತ್ತಿಲ್ಲ. ಬೌಲಿಂಗ್ ವಿಭಾಗ ಏಕಾಏಕಿಯಾಗಿ ದುರ್ಬಲವಾಗುತ್ತದೆ. ಇವರು ವಿಕೆಟ್‌ ಪಡೆಯುವುದೇ ಇಲ್ಲ ಎಂದು ಭಾಸವಾಗುತ್ತದೆ. ಬಾಂಗ್ಲಾದೇಶದ ವಿರುದ್ಧದ ಎರಡನೇ ಪಂದ್ಯದಲ್ಲಿ 69 ರನ್‌ಗೆ 6 ವಿಕೆಟ್‌ ಪಡೆದರೂ, ಬಾಂಗ್ಲಾ 271 ರನ್‌ ಗಳಿಸುತ್ತದೆ. ಏನಾಗುತ್ತಿದೆ ಇಲ್ಲಿ?‘ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.