ನವದೆಹಲಿ: ತಂತ್ರಜ್ಞಾನಗಳ ಪರಿಣಾಮಕಾರಿಯಾದ ಬಳಕೆಯಿಂದ ಕೋರ್ಟ್‌ಗಳು ಹೆಚ್ಚು ಉತ್ತರದಾಯಿತ್ವ ಹಾಗೂ ಜವಾಬ್ದಾರಿಯುತವಾಗುತ್ತವೆ. ಜನರನ್ನು ನ್ಯಾಯಾಂಗಕ್ಕೆ ಇನ್ನಷ್ಟು ಹತ್ತಿರವಾಗಿಸಲಿದೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅಭಿಪ್ರಾಯಪಟ್ಟಿದ್ದಾರೆ.
ತಂತ್ರಜ್ಞಾನದ ಬಳಕೆಯು ಸಮಾನವಾಗಿ ನ್ಯಾಯ ಪಡೆಯುವುದು, ಪ್ರಜಾಪ್ರಭುತ್ವ ಮತ್ತು ಪಾರದರ್ಶಕೆಯ ಮೌಲ್ಯಗಳಿಗೆ ಸಂಪರ್ಕ ಹೊಂದಿದ್ದಾಗಿದೆ. ತಂತ್ರಜ್ಞಾನದ ಬಳಕೆ ಎಂದರೆ ನ್ಯಾಯ ಪಡೆಯುವ ಆಧುನಿಕ ವ್ಯವಸ್ಥೆ ಎಂದೇ ಹೆಚ್ಚಿನವರು ಭಾವಿಸಿದ್ದಾರೆ. ಆದರೆ, ಇದು ಗಣತಂತ್ರದ ಜೊತೆಗೆ ಮಿಳಿತವಾಗಿದೆ ಎಂದರು.
ಕೃತಕ ಬುದ್ದಿಮತ್ತೆಯ ಬಳಕೆಯು ವಕೀಲರಿಗೆ, ವೃತ್ತಿಯ ಮೂಲಕೌಶಲದ ಮೇಲೆ ನಕಾರಾತ್ಮಕ ಪರಿಣಾಮ ಆಗದಂತೆಯೇ ಒಟ್ಟಾರೆಯಾಗಿ ಇನ್ನಷ್ಟು ಪರಿಣಾಮಕಾರಿಯಾಗಿ ವಾದ ಮಂಡಿಸಲು ಸಹಕಾರಿಯಾಗಲಿದೆ ಎಂದು ಸಿಜೆಐ ಅಭಿಪ್ರಾಯಪಟ್ಟರು.
ಚಂಡಿಗಢ ನ್ಯಾಯಾಂಗ ಅಕಾಡೆಮಿಯಲ್ಲಿ ನಡೆದ ‘ಭಾರತದ ಕೋರ್ಟ್‌ಗಳಲ್ಲಿ ತಂತ್ರಜ್ಞಾನದ ಬಳಕೆ’ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ತಂತ್ರಜ್ಞಾನ ಬಳಕೆ ಸೇರಿದಂತೆ ವೃತ್ತಿಯಲ್ಲಿನ ಬದಲಾವಣೆಯು ಯುವ ವಕೀಲರಿಗೆ ಗಂಟೆಗಟ್ಟಲೆ ಸಾಂಪ್ರದಾಯಿಕವಾಗಿ ಅಧ್ಯಯನ ಮಾಡುವುದರಿಂದ ಮುಕ್ತಿ ನೀಡಿದೆ. ಜೊತೆಗೆ ಆಳವಾದ ಕಾನೂನು ವಿಶ್ಲೇಷಣೆ, ಬರವಣಿಗೆಗೆ ಅವಕಾಶ ಕಲ್ಪಿಸಿದೆ. ಇದು, ವೃತ್ತಿಯ ಭದ್ರ ಅಡಿಪಾಯವೂ ಹೌದು ಎಂದರು.
ಸುಪ್ರೀಂ ಕೋರ್ಟ್ ವಿಧಿಕ್ ಅನುವಾದ್ ಸಾಫ್ಟ್‌ವೇರ್ (ಸುವಾಸ್) ಹೆಸರಿನ ಕೃತಕ ಬುದ್ದಿಮತ್ತೆಯ ಸಾಫ್ಟವೇರ್ ಬಳಸುವ ಮೂಲಕ ಸುಪ್ರೀಂ ಕೋರ್ಟ್, ಈಗ ತೀರ್ಪು ಮತ್ತು ಆದೇಶಗಳನ್ನು ಸಕ್ರಿಯವಾಗಿ ಪ್ರಾದೇಶಿಕ ಭಾಷೆಗಳಿಗೆ ಅನುವಾದ ಮಾಡಲಾಗುತ್ತಿದೆ. ಸಂವಿಧಾನದ ಪರಿಚ್ಛೇದದಲ್ಲಿ ಉಲ್ಲೇಖವಾಗಿರುವ ಎಲ್ಲ ಭಾಷೆಗಳಿಗೂ ಅನುವಾದ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಲಾಗುತ್ತಿದೆ ಎಂದು ವಿವರಿಸದಿರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.