ಹೈದರಾಬಾದ್: ಸಾಮಾಜಿಕ ಭದ್ರತಾ ಪಿಂಚಣಿ ಮೊತ್ತ ಹೆಚ್ಚಳ, ‘ರೈತ ಬಂಧು’ ಹೂಡಿಕೆ ಬೆಂಬಲ ಯೋಜನೆಯಡಿ ನೀಡಲಾಗುವ ಆರ್ಥಿಕ ಸಹಾಯ ಹೆಚ್ಚಿಸುವುದು ಮತ್ತು ₹400ಕ್ಕೆ ಎಲ್‌ಪಿಜಿ ಸಿಲಿಂಡರ್...
ಇದು ತೆಲಂಗಾಣದಲ್ಲಿ ಆಡಳಿತಾರೂಢ ಬಿಆರ್‌ಎಸ್ ನೀಡಿರುವ ಭರವಸೆಗಳು. ನವೆಂಬರ್ 30ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಆರ್‌ಎಸ್ ಮುಖ್ಯಸ್ಥ ಮತ್ತು ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್, ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) 93 ಲಕ್ಷ ಕುಟುಂಬಗಳಿಗೆ ₹5 ಲಕ್ಷ ರೂಪಾಯಿಗಳ ಜೀವ ವಿಮಾ ರಕ್ಷಣೆ ನೀಡಲಾಗುವುದು ಮತ್ತು ಪ್ರೀಮಿಯಂ ಮೊತ್ತವನ್ನು ಸರ್ಕಾರ ಭರಿಸುತ್ತದೆ ಎಂದು ಹೇಳಿದರು.
ಪ್ರಸ್ತುತ ₹2,016 ಇರುವ ಸಾಮಾಜಿಕ ಭದ್ರತಾ ಪಿಂಚಣಿಯ ಮೊತ್ತವನ್ನು ಮುಂದಿನ ಐದು ವರ್ಷಗಳಲ್ಲಿ ತಿಂಗಳಿಗೆ ₹5,000ಕ್ಕೆ ಹಂತಹಂತವಾಗಿ ಹೆಚ್ಚಿಸಲಾಗುವುದು. ಅದೇ ರೀತಿ ಅಂಗವಿಕಲರ ಪಿಂಚಣಿಯನ್ನು ಮುಂದಿನ ಐದು ವರ್ಷಗಳಲ್ಲಿ ಈಗಿರುವ ₹4,016ರಿಂದ ₹6,016ಕ್ಕೆ ಏರಿಕೆ ಮಾಡಲಾಗುವುದು ಎಂದರು.
‘ರೈತ ಬಂಧು’ ಯೋಜನೆಯ ಅಡಿ ರೈತರಿಗೆ ಎಕರೆಗೆ ವಾರ್ಷಿಕ ₹10,000 ನೀಡುತ್ತಿರುವುದನ್ನು, ಮುಂದಿನ ಐದು ವರ್ಷಗಳಲ್ಲಿ ಹಂತ ಹಂತವಾಗಿ ₹16,000ಕ್ಕೆ ಹೆಚ್ಚಿಸಲಾಗುವುದು. ಗ್ಯಾಸ್ ಸಿಲಿಂಡರ್ ಅನ್ನು ಅರ್ಹ ಫಲಾನುಭವಿಗಳಿಗೆ ₹400ಕ್ಕೆ ನೀಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ.
ತಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ರಾವ್, ಘೋಷಿಸಿದ ಭರವಸೆಗಳನ್ನು ಸರ್ಕಾರ ರಚಿಸಿದ 6ರಿಂದ 7 ತಿಂಗಳಲ್ಲಿ ಜಾರಿಗೆ ತರಲಾಗುವುದು ಎಂದರು. ತಮ್ಮ ಸರ್ಕಾರವು ಶೇಕಡ 90ರಷ್ಟು ಕಲ್ಯಾಣ ಯೋಜನೆಗಳನ್ನು ಹಿಂದಿನ ಚುನಾವಣೆಯ ಪ್ರಣಾಳಿಕೆಯಲ್ಲಿ ಉಲ್ಲೇಖಿಸದಿದ್ದರೂ ಜಾರಿಗೆ ತಂದಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.