ಹೈದರಾಬಾದ್: ಮತಗಟ್ಟೆ ಸಮೀಕ್ಷೆಗಳ ‘ಭವಿಷ್ಯ’ ನಿಜವಾಗಿದ್ದು, ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಿಗುವುದು ಬಹುತೇಕ ಖಚಿತವಾಗಿದೆ.
ಇಂದು ಮತ ಎಣಿಕೆ ನಡೆಯುತ್ತಿದ್ದು, 63 ಸ್ಥಾನಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದರೆ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷವು 40, ಬಿಜೆಪಿ 9ರಲ್ಲಿ ಹಾಗೂ 7ರಲ್ಲಿ ಪಕ್ಷೇತರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.
ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಬಹುಮತದತ್ತ ದಾಪುಗಾಲಿಟ್ಟಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆ.
ಇದರ ಬೆನ್ನಲ್ಲೇ ಚುನಾವಣಾ ಫಲಿತಾಂಶ ಕುರಿತು ಬಿಆರ್‌ಎಸ್ ಪಕ್ಷದ ಕಾರ್ಯಾಧ್ಯಕ್ಷ ಕೆ.ಟಿ. ರಾಮ ರಾವ್ ಅವರು ಪ್ರತಿಕ್ರಿಯಿಸಿದ್ದು, ‘ತೆಲಂಗಾಣದಲ್ಲಿ ಸತತ ಎರಡು ಬಾರಿ ಸರ್ಕಾರ ನಡೆಸಲು ಬಿಆರ್‌ಎಸ್‌ಗೆ ಅಧಿಕಾರ ನೀಡಿದ್ದಕ್ಕಾಗಿ ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇಂದು ಪ್ರಕಟಗೊಂಡ ಫಲಿತಾಂಶದ ಬಗ್ಗೆ ಬೇಸರವಾಗಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಎಚ್ಚರಿಕೆ ಹೆಜ್ಜೆ ಇಡುವ ಮೂಲಕ ರಾಜ್ಯದಲ್ಲಿ ಮತ್ತೆ ಪುಟಿದೇಳುತ್ತೇವೆ. ಜನಾದೇಶ ಪಡೆದ ಕಾಂಗ್ರೆಸ್‌ಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ತಿಳಿಸಿದ್ದಾರೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ ಎಂದು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಹೇಳಿವೆ. 119 ಸ್ಥಾನಗಳಲ್ಲಿ 60 ರಿಂದ 70 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದವು. ತೆಲಂಗಾಣ ವಿಧಾನಸಭೆಯ ಮ್ಯಾಜಿಕ್ ನಂಬರ್ 60.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.