ಹೈದರಾಬಾದ್: ನಿರ್ದಿಷ್ಟ ಧರ್ಮವೊಂದರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದಲ್ಲಿ ಬಿಜೆಪಿ ಶಾಸಕ ರಾಜಾ ಸಿಂಗ್ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತೆಲಂಗಾಣ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಇತ್ತೀಚೆಗೆ ಹೈದರಾಬಾದ್‌ನಲ್ಲಿ ಕಮಿಡಿಯನ್ ಮುನವ್ವರ್ ಫಾರೂಕಿ ನಡೆಸಿಕೊಟ್ಟಿದ್ದ ಕಾರ್ಯಕ್ರಮವೊಂದರ ಬಗ್ಗೆ ಟೀಕಿಸಿ ವಿಡಿಯೊ ತುಣುಕನ್ನು ರಾಜಾ ಸಿಂಗ್ ಸೋಮವಾರ ಬಿಡುಗಡೆ ಮಾಡಿದ್ದರು. ಅದರಲ್ಲಿ ಧರ್ಮದ ವಿರುದ್ಧ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಈ ವಿಚಾರವಾಗಿ ರಾಜಾ ಸಿಂಗ್ ವಿರುದ್ಧ ಸೋಮವಾರ ರಾತ್ರಿ ಹೈದರಾಬಾದ್‌ನಲ್ಲಿ ಪ್ರತಿಭಟನೆ ನಡೆದಿತ್ತು. ಸಿಂಗ್ ಅವರನ್ನು ಬಂಧಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದರು.
ತೆಲಂಗಾಣದ ಐಟಿ ಮತ್ತು ಉದ್ಯಮ ಖಾತೆ ಸಚಿವ ಕೆ.ಟಿ. ರಾಮರಾವ್ ಅವರ ಆಹ್ವಾನದ ಮೇರೆಗೆ ಮುನವ್ವರ್ ಫಾರೂಕಿ ಹೈದರಾಬಾದ್‌ನಲ್ಲಿ ‘ಡೋಂಗ್ರಿ ಟು ನೋವೇರ್‘ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಬಿಗಿ ಭದ್ರತೆಯ ನಡುವೆ ಕಾರ್ಯಕ್ರಮ ನಡೆದಿತ್ತು. ಮುನವ್ವರ್ ಕಾರ್ಯಕ್ರಮ ನಡೆಸಿದರೆ, ಶೋ ನಡೆಯುವ ವೇದಿಕೆಗೆ ಬೆಂಕಿ ಹಚ್ಚುವುದಾಗಿಯೂ, ಫಾರೂಕ್ ಮೇಲೆ ಹಲ್ಲೆ ನಡೆಸುವುದಾಗಿಯೂ ರಾಜಾ ಸಿಂಗ್ ಬೆದರಿಕೆ ಒಡ್ಡಿದ್ದರು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.