ADVERTISEMENT

ಪೊಲೀಸರು ನನ್ನನ್ನು ಬಂಧಿಸುವಾಗಲೇ ‘ಮೊಬೈಲ್‘ ಕಳೆದುಹೋಗಿದೆ: ದೂರು ನೀಡಿದ BJP ನಾಯಕ

ಪಿಟಿಐ
Published 10 ಏಪ್ರಿಲ್ 2023, 7:46 IST
Last Updated 10 ಏಪ್ರಿಲ್ 2023, 7:46 IST
ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್‌ಕುಮಾರ್‌
ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್‌ಕುಮಾರ್‌   

ಹೈದರಾಬಾದ್‌ : ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ತೆಲಂಗಾಣ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್, ‘ನನ್ನನ್ನು ಬಂಧಿಸುವ ವೇಳೆ ಮೊಬೈಲ್‌ ಕಳೆದುಹೋಗಿದೆ, ಪತ್ತೆ ಹಚ್ಚಿಕೊಡಿ‘ ಎಂದು ಕರೀಂನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಕರೀಂನಗರ ಲೋಕಸಭಾ ಸಂಸದರೂ ಆಗಿರುವ ಸಂಜಯ್‌ಕುಮಾರ್‌ ವಿರುದ್ಧ 10ನೇ ತರಗತಿ (ಎಸ್‌ಎಸ್‌ಸಿ) ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಪ್ರಕರಣ ದಾಖಲಾಗಿತ್ತು. ಬುಧವಾರ (ಏಪ್ರಿಲ್‌ 5) ತಡರಾತ್ರಿ ವಾರಂಗಲ್ ಪೊಲೀಸರು ಅವರನ್ನು ಅವರ ನಿವಾಸದಲ್ಲೇ ಬಂಧಿಸಿದ್ದರು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ತದನಂತರ ಅವರನ್ನು ನಲಗೊಂಡ ಜಿಲ್ಲೆಯ ಬೊಮ್ಮಲ ರಾಮರಾಮ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು. ಏಪ್ರಿಲ್‌ 6ರಂದು ಅವರು ಜಾಮೀನಿನ ಮೇಲೆ ಹೊರಬಂದಿದ್ದರು.

ಸಂಜಯ್‌ಕುಮಾರ್‌ ಅವರ ಬಂಧನದ ಬಳಿಕ ವಾರಂಗಲ್ ಪೊಲೀಸ್ ಕಮಿಷನರ್ ಎ.ವಿ. ರಂಗನಾಥ್ ಅವರು ಮೊಬೈಲ್‌ ನೀಡುವಂತೆ ಕೇಳಿದ್ದರು. ಆಗ, 'ನನ್ನ ಬಳಿ ಫೋನ್‌ ಇಲ್ಲ' ಎಂದು ಸಂಜಯ್‌ಕುಮಾರ್‌ ಪ್ರತಿಕ್ರಿಯಿಸಿದ್ದರು.

ADVERTISEMENT

ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು, ಸಂಜಯ್ ಮತ್ತು ಪ್ರಕರಣದ ಎರಡನೇ ಆರೋಪಿಯ (ಟಿವಿ ಚಾನೆಲ್‌ನ ಮಾಜಿ ಪತ್ರಕರ್ತ) ನಡುವೆ ವಾಟ್ಸಾಪ್ ಕರೆಗಳು, ವಾಟ್ಸ್‌ಆ್ಯಪ್ ಸಂಭಾಷಣೆ ನಡೆದಿರುವುದಾಗಿ ಅನುಮಾನ ವ್ಯಕ್ತಪಡಿಸಿದ್ದರು. ಇದೀಗ, ಮೊಬೈಲ್‌ ಕಳೆದು ಹೋಗಿರುವುದಾಗಿ ಸಂಜಯ್‌ಕುಮಾರ್‌ ದೂರು ನೀಡಿರುವುದು ಇನ್ನಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

‘ನನ್ನನ್ನು ಏಪ್ರಿಲ್‌ 5ರ ತಡರಾತ್ರಿ ಬಂಧಿಸಲಾಗಿತ್ತು. ಆ ವೇಳೆ ನನ್ನನ್ನು ಬೊಮ್ಮಲ ರಾಮರಾಮ್‌ ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿದ್ದರು. ಪ್ರಯಾಣದ ವೇಳೆ ನನಗೆ ಮೊಬೈಲ್‌ ಕಳೆದು ಹೋಗಿರುವುದು ಗೊತ್ತಾಗಿದೆ. ಈ ಬಗ್ಗೆ ಪೊಲೀಸರು ಗಮನಕ್ಕೂ ತಂದಿದ್ದೇನೆ. ಜಾಮೀನು ಸಿಕ್ಕ ಬಳಿಕ ತಮ್ಮ ವಕೀಲರಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇನೆ‘ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಕಸ್ಟಡಿಗೆ ತೆಗೆದುಕೊಳ್ಳುವ ವೇಳೆ ನನ್ನ ಬಳಿ ಮೊಬೈಲ್‌ ಇತ್ತು ಎಂಬುದು ನನಗೆ ನೆನಪಿದೆ. ಎಲ್ಲ ಸಂಪರ್ಕ ಸಂಖ್ಯೆಗಳು ಅದರಲ್ಲಿವೆ ಜೊತೆಗೆ ಪಕ್ಷಕ್ಕೆ ಸಂಬಂಧಿಸಿದ ಮಾಹಿತಿಗಳು ಅದರಲ್ಲಿವೆ. ಆದ್ದರಿಂದ ಮೊಬೈಲ್‌ ಪತ್ತೆ ಹಚ್ಚಿಕೊಡುವಂತೆ‘ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಎಲ್ಲಿ ಮಾಹಿತಿಗಳೆಲ್ಲ ಹೊರಬರುತ್ತದೆಯೋ ಎಂಬ ಕಾರಣಕ್ಕೆ ಬಂಡಿ ಸಂಜಯ್‌ಕುಮಾರ್‌ ಮೊಬೈಲ್‌ ಕಳೆದು ಹೋದ ನಾಟಕವಾಡುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಟೀಕಿಸಿವೆ.

ಏಪ್ರಿಲ್‌ 3ರಂದು ತೆಲಂಗಾಣದಲ್ಲಿ 10ನೇ ತರಗತಿ ಪರೀಕ್ಷೆಗಳು(ಎಸ್‌ಎಸ್‌ಸಿ) ಪ್ರಾರಂಭವಾಗಿದ್ದು. ಏಪ್ರಿಲ್‌ 4 ಮತ್ತು 5ರಂದು ಹಿಂದಿ ಮತ್ತು ತೆಲುಗು ಪ್ರಶ್ನೆ ಪತ್ರಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಈ ಪ್ರಕರಣದಲ್ಲಿ ಬಂಡಿ ಸಂಜಯ್‌ಕುಮಾರ್‌ ಕೈವಾಡವಿರುವ ಅನುಮಾನ ಬಂದಿದ್ದು, ಅವರನ್ನು ಬಂಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.