ADVERTISEMENT

ಟಿಎಸ್‌ಆರ್‌ಟಿಸಿ ಮುಷ್ಕರ: ಅವರ ಬದುಕು, ಇವರ ಹುನ್ನಾರ, ಇನ್ನೊಬ್ಬರ ರಾಜಕಾರಣ

ಸರ್ಕಾರಿ ಬಸ್‌ಗಳು ರಸ್ತೆಗಿಳಿಯದೇ 17 ದಿನಗಳಾದವು

ಘನಶ್ಯಾಮ ಡಿ.ಎಂ.
Published 23 ಅಕ್ಟೋಬರ್ 2019, 4:52 IST
Last Updated 23 ಅಕ್ಟೋಬರ್ 2019, 4:52 IST
   

‘ಬಂಗಾರದ ರಾಜ್ಯ ನಿರ್ಮಿಸುತ್ತೇನೆ’ ಎಂದು ಕನಸು ಬಿತ್ತಿ ಎರಡನೇ ಬಾರಿಗೆ ತೆಲಂಗಾಣ ರಾಜ್ಯದ ಮುಖ್ಯಮಂತ್ರಿಯಾದವರು ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್‌ಎಸ್)ಕೆ.ಚಂದ್ರಶೇಖರ್‌ರಾವ್‌. ತಮಗಾಗಿ ಪ್ರತ್ಯೇಕ ರಾಜ್ಯ ಕೇಳಿದ, ಸುದೀರ್ಘ ಅವಧಿಗೆ ಬದ್ಧತೆಯಿಂದ ಹೋರಾಡಿದ ಈ ವ್ಯಕ್ತಿಯನ್ನುಅಲ್ಲಿನ ಜನರು ಪ್ರೀತಿಯಿಂದ ‘ಕೆಸಿಆರ್‌’ ಎಂದೇ ಕರೆಯುತ್ತಿದ್ದರು. ಅಭಿವೃದ್ಧಿಯಕನಸು ಬಿತ್ತಿ ಅಧಿಕಾರಕ್ಕೆ ಬಂದನಾಯಕನ ಆಡಳಿತದ ಬಗ್ಗೆ ಕಳೆದ 18ದಿನಗಳಲ್ಲಿ ಅದೇ ಜನರಿಗೆ ಹೇವರಿಕೆ ಬಂದುಬಿಟ್ಟಿದೆ ಎನ್ನುವುದು ಮಾತ್ರ ವಿಪರ್ಯಾಸ.ಮುಖ್ಯಮಂತ್ರಿಯ ಜನಪ್ರಿಯತೆಯೂ ಈಚೆಗೆದಿಢೀರ್ ಎಂದು ಕುಸಿಯತ್ತಿದೆ.

ಅ.5ರಿಂದ ಆರಂಭವಾದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಎಸ್‌ಆರ್‌ಟಿಸಿ) ಸಿಬ್ಬಂದಿಯ ಮುಷ್ಕರ ರಾಜ್ಯದ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.18ದಿನಗಳಿಂದ 10 ಸಾವಿರಕ್ಕೂ ಹೆಚ್ಚು ಬಸ್‌ಗಳು ರಸ್ತೆಗಿಳಿದಿಲ್ಲ, 48 ಸಾವಿರ ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದಾರೆ, ನಿಗಮದ ಓರ್ವ ಚಾಲಕ, ಓರ್ವ ನಿರ್ವಾಹಕಆತ್ಮಹತ್ಯೆ ಮಾಡಿಕೊಂಡಿದ್ದರೆ, ಇತರ ಮೂವರು ವಿವಿಧ ಕಾರಣಗಳಿಂದ ಸಾವನ್ನಪ್ಪಿದ್ದಾರೆ.

ಜನಜೀವನ ಅಸ್ತವ್ಯಸ್ತ

ADVERTISEMENT

ನಿಗಮದ ಸಿಬ್ಬಂದಿಯ ನೋವು, ಆ ಕುಟುಂಬಗಳ ಬಿಸಿಯುಸಿರು ನಿಧಾನವಾಗಿ ರಾಜ್ಯವನ್ನು ಆವರಿಸುತ್ತಿದೆ. ಸದ್ಯಕ್ಕೆ ಪರಿಸ್ಥಿತಿ ಸುಧಾರಿಸುವ ಯಾವುದೇ ಲಕ್ಷಣಗಳೂ ಕಾಣಿಸುತ್ತಿಲ್ಲ.ಹೈದರಾಬಾದ್‌ ಮಹಾನಗರದಲ್ಲಿಯೇ ಸಂಚಾರ ದುಸ್ತರ ಎಂಬಂತೆ ಆಗಿದೆ. ಮೆಟ್ರೊ ರೈಲುಗಳು, ಲೋಕಲ್ ರೈಲುಗಳು ಕಿಕ್ಕಿರಿದು ಸಂಚರಿಸುತ್ತಿವೆ. ಅಕ್ಕಪಕ್ಕದ ರಾಜ್ಯಗಳ ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ, ಎಪಿಎಸ್‌ಆರ್‌ಟಿಸಿ ಬಸ್‌ಗಳು ಹೆಚ್ಚುವರಿ ಸೇವೆ ಒದಗಿಸಿದರೂ ಜನರ ಸಂದಣಿ ಕರಗುತ್ತಿಲ್ಲ. ಆಟೊ, ಟೆಂಪೊ, ಖಾಸಗಿ ಬಸ್‌ಗಳುಜನರನ್ನು ಸುಲಿದು ಹಬ್ಬ ಮಾಡಿಕೊಳ್ಳುತ್ತಿವೆ. ಗ್ರಾಮೀಣ ಪ್ರದೇಶದ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ.

ಟಿಎಸ್‌ಆರ್‌ಟಿಸಿಯ ವಿವಿಧ ಕಾರ್ಮಿಕ ಸಂಘಟನೆಗಳ ಜೊತೆಗೂಡಿರುವಸರ್ಕಾರಿ ನೌಕರರು, ವಿದ್ಯಾರ್ಥಿಗಳು ಮತ್ತು ಕಾರ್ಮಿಕರು ಹೋರಾಟಕ್ಕಾಗಿ ಜಂಟಿ ಕಾರ್ಯಪಡೆ (ಜೆಎಸಿ) ರೂಪಿಸಿಕೊಂಡಿದ್ದಾರೆ.ಹೈದರಾಬಾದ್‌ ಸೇರಿದಂತೆ ರಾಜ್ಯದ ವಿವಿಧೆಡೆ ಪ್ರತಿಭಟನಾ ಮೆರವಣಿಗೆಗಳು ನಿತ್ಯದ ವಿದ್ಯಮಾನ ಎಂಬಂತೆ ಆಗಿದೆ. ಕಾರ್ಯಪಡೆಯ ಕರೆಗೆ ಓಗೊಟ್ಟಿರುವ ನಿಗಮದ 48 ಸಾವಿರ ಸಿಬ್ಬಂದಿ ಈ ಬಾರಿ ದೀಪಾವಳಿ ಹಬ್ಬವನ್ನೂ ಆಚರಿಸುವುದಿಲ್ಲ ಎಂದು ಘೋಷಿಸಿದ್ದಾರೆ.

ತೆಲಂಗಾಣದಲ್ಲಿ ಇಂಥ ದೃಶ್ಯಗಳು ಈಗ ಸಾಮಾನ್ಯ

ಹಟಮಾರಿ ಧೋರಣೆ

ತೆಲಂಗಾಣ ಹೈಕೋರ್ಟ್‌ ನ್ಯಾಯಾಧೀಶರು, ರಾಜ್ಯಪಾಲರು ಕಿವಿಮಾತು ಹೇಳಿದರೂ ಪ್ರತಿಭಟನಾನಿರತರೊಡನೆ ಮಾತುಕತೆಗೆ ಮುಂದಾಗದ ಸರ್ಕಾರ ಹಂಗಾಮಿ ಚಾಲಕರು ಮತ್ತು ಕಂಡಕ್ಟರ್‌ಗಳನ್ನು ನೇಮಿಸಿಕೊಂಡು ಒಂದಿಷ್ಟು ಬಸ್‌ಗಳನ್ನು ಓಡಿಸಿ ಜನರ ಸಂಕಷ್ಟ ಕಡಿಮೆ ಮಾಡಲು ಯತ್ನಿಸುತ್ತಿದೆ. ಆದರೆ ಸರ್ಕಾರದ ಈ ಕ್ರಮದಿಂದ ಎಳ್ಳಷ್ಟೂ ಪ್ರಯೋಜನವಾಗಿಲ್ಲ. ‘ವಜಾ ಮಾಡಿರುವ ನೌಕರರನ್ನು ಕೆಲಸಕ್ಕೆ ಮತ್ತೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದು ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ರಾವ್ ಹಟ ಹಿಡಿದಿದ್ದಾರೆ. ಅವರ ಪಕ್ಷದೊಳಗೇ ಈ ಧೋರಣೆಗೆ ಆಕ್ಷೇಪಗಳು ವ್ಯಕ್ತವಾಗುತ್ತಿವೆ.

ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಆಗ್ರಹಿಸಿ ಟಿಆರ್‌ಎಸ್‌ ನಡೆಸಿದ್ದ ಹೋರಾಟದಲ್ಲಿ ಟಿಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳೂ ಸಕ್ರಿಯವಾಗಿ ಪಾಲ್ಗೊಂಡಿದ್ದವು. ಚಂದ್ರಶೇಖರ್‌ರಾವ್‌ ಅವರನ್ನು ಬೆಂಬಲಿಸಿದ್ದವು. ಆದರೆ ಈಗ ‘ಮಾತುಕತೆಗೆ ತಯಾರಿಲ್ಲ’ ಎನ್ನುವ ಕೆಸಿಆರ್ ನಿಲುವು ಈ ಸಂಘಟನೆಗಳನ್ನು ಕೆರಳಿಸಿವೆ.

ಬೇಡಿಕೆಗಳೇನು?

ಟಿಎಸ್‌ಆರ್‌ಟಿಸಿ ಸಿಬ್ಬಂದಿ ಒಟ್ಟು 26 ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಈ ಪೈಕಿ2017ರಿಂದ ಬಾಕಿಯಿರುವ ವೇತನ ಪರಿಷ್ಕರಣೆಯನ್ನು ಶೀಘ್ರ ಜಾರಿ ಮಾಡಬೇಕು. ರಾಜ್ಯ ಸರ್ಕಾರದೊಂದಿಗೆ ಟಿಎಸ್‌ಆರ್‌ಟಿಸಿ ವಿಲೀನಗೊಳ್ಳಬೇಕು. ನಿಗಮವನ್ನು ಖಾಸಗೀಕರಣ ಮಾಡುವುದಿಲ್ಲ ಎಂಬ ಭರವಸೆ ನೀಡಬೇಕು. ರಾಜ್ಯ ಸರ್ಕಾರದಿಂದ ನಿಗಮಕ್ಕೆ ಬರಬೇಕಿರುವ ಎಲ್ಲ ಬಾಕಿ ಹಣ ಬಿಡುಗಡೆ ಮಾಡಬೇಕು. ರಾಜ್ಯ ಬಜೆಟ್‌ನ ಶೇ 1ರಷ್ಟು ಮೊತ್ತವನ್ನು ನಿಗಮಕ್ಕೆ ಮೀಸಲಿಡಬೇಕು. ಚಾಲಕರು ಮತ್ತು ನಿರ್ವಾಹಕರಿಗೆ ವೃತ್ತಿ ಭದ್ರತೆ ಒದಗಿಸಬೇಕುಎಂಬುದು ಕಾರ್ಮಿಕ ಸಂಘಟನೆಗಳ ಪ್ರಮುಖ ಒತ್ತಾಯಗಳು.

ಸರ್ಕಾರದ ವಾದವೇನು?

‘ಕಳೆದ ಆರು ವರ್ಷಗಳಲ್ಲಿ ನಿಗಮ ಒಟ್ಟು ₹ 7500 ಕೋಟಿ ನಷ್ಟ ಅನುಭವಿಸಿದೆ. ಇದಕ್ಕೆ ಮುಖ್ಯ ಕಾರಣ ಕ್ಷಮತೆ ಮತ್ತು ಬದ್ಧತೆಯಿಲ್ಲದ ಕಾರ್ಮಿಕರು’ ಎಂದು ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್‌ಸಿಟ್ಟಿನಲ್ಲಿ ಮಾತನಾಡುತ್ತಾರೆ.

‘ಸಾರಿಗೆ ನಿಗಮವನ್ನು ರಾಜ್ಯ ಸರ್ಕಾರದೊಂದಿಗೆ ವಿಲೀನಗೊಳಿಸುವ ಭರವಸೆಯನ್ನುಟಿಆರ್‌ಎಸ್ ಎಂದಿಗೂ ನೀಡಿರಲಿಲ್ಲ. ಇದು ನಮ್ಮ ಚುನಾವಣಾ ಭರವಸೆಯೂ ಆಗಿರಲಿಲ್ಲ. ವೇತನ ಪರಿಷ್ಕರಣೆ ಬಾಕಿಯಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಅದರೆ ಸೂಕ್ತ ಸಂದರ್ಭದಲ್ಲಿ ಸಂಬಳ ಹೆಚ್ಚಿಸುತ್ತಿದ್ದೆವು. ಇದಕ್ಕಾಗಿ ಕಾರ್ಮಿಕರು ಮುಷ್ಕರಕ್ಕೆ ಮುಂದಾಗುವ ಅಗತ್ಯವಿರಲಿಲ್ಲ’ ಎಂದು ಸಾರಿಗೆ ಸಚಿವ ಪಿ.ಅಜಯ್‌ಕುಮಾರ್‌ ಹೇಳಿದ್ದಾರೆ.

ಮುಷ್ಕರ ಆರಂಭಿಸುವ 10 ದಿನ ಮೊದಲೇ ಕಾರ್ಮಿಕ ಸಂಘಟನೆಗಳು ಸರ್ಕಾರಕ್ಕೆ ನೊಟೀಸ್ ಕೊಟ್ಟಿದ್ದವು. ಆದರೆ ಇದೊಂದು ಮಾಮೂಲಿ ಬ್ಲಾಕ್‌ಮೇಲ್ ತಂತ್ರ ಎಂದು ಮುಖ್ಯಮಂತ್ರಿ ಸಚಿವಾಲಯ ನಿರ್ಲಕ್ಷಿಸಿತ್ತು. ಮುಷ್ಕರ ನಡೆಸಿದರೆ ಶಿಸ್ತುಕ್ರಮ ಎದುರಿಸಬೇಕಾಗುತ್ತೆ ಎಂದು ಎಚ್ಚರಿಸಲು ಸೆಪ್ಟೆಂಬರ್ ತಿಂಗಳ ವೇತನ ತಡೆಹಿಡಿಯಲಾಯಿತು. ಆದರೂ ಕಾರ್ಮಿಕರು ತಮ್ಮ ನಿರ್ಧಾರ ಸಡಿಲಿಸದೆ ಮುಷ್ಕರ ಆರಂಭಿಸಿಯೇ ಬಿಟ್ಟರು.

‘ತೆಲಂಗಾಣಕ್ಕೆ ನವರಾತ್ರಿ–ದಸರಾ ಮುಖ್ಯ ಹಬ್ಬ. ಲಕ್ಷಾಂತರ ಜನರು ಮನೆಗಳಿಗೆ ಹೋಗಬೇಕು ಎಂದು ಹಾತೊರೆಯುವ ಹಬ್ಬ. ಇಂಥ ಸಂದರ್ಭದಲ್ಲಿ ಮುಷ್ಕರ ಮಾಡಿ ಜನರಿಗೆ ತೊಂದರೆ ಕೊಟ್ಟರು’ ಎನ್ನುವುದು ಸಚಿವರು, ಮುಖ್ಯಮಂತ್ರಿಯ ಸಿಟ್ಟು.

ಕಳೆದ ವರ್ಷ ತೆಲಂಗಾಣದಲ್ಲಿ ಜಗತಿಯಾಳ್ ಜಿಲ್ಲೆಯಲ್ಲಿ 11ನೇ ಸೆಪ್ಟೆಂಬರ್ 2018ರಂದು ಕಮರಿಗೆ ಬಿದ್ದಿದ್ದ ಸಾರಿಗೆ ನಿಗಮದ ಬಸ್

ಕಸದ ಲಾರಿ ಓಡಿಸುವವರ ಕೈಗೆ ನಿಗಮದ ಬಸ್‌

ಹಬ್ಬದ ವೇಳೆ ಆರಂಭವಾದ ಮುಷ್ಕರದಿಂದ ಕಂಗಾಲಾದ ಸರ್ಕಾರ8 ತಾಸು ಬಸ್‌ ಓಡಿಸಿದ್ರೆ ₹ 2000 ದಿನಗೂಲಿ ನೀಡುವ ಆಮಿಷವೊಡ್ಡಿ ಚಾಲಕರನ್ನು ತಲಾಶ್ ಮಾಡಲು ಆರಂಭಿಸಿತು. ಸರ್ಕಾರದ ಈ ಆಮಿಶ ಬಹಿರಂಗವಾದ ದಿನದಿಂದಹೈದರಾಬಾದ್‌ನಲ್ಲಿ ಕಸದ ಲಾರಿಗಳ ಸಂಚಾರವೇ ಕಡಿಮೆಯಾಯ್ತು. ಕಸದ ಲಾರಿ ಓಡಿಸುತ್ತಿದ್ದ ಚಾಲಕರೆಲ್ಲರೂ ಮಾಮೂಲಿ ಕೆಲಸಕ್ಕೆ ರಜೆ ಹಾಕಿ, ಸರ್ಕಾರಿ ಬಸ್‌ಗಳ ಸ್ಟೇರಿಂಗ್ ಹಿಡಿದಿದ್ದರು. ಇವರನ್ನುದೂರ ಪ್ರಯಾಣದ ಬಸ್‌ಗಳಿಗೆಹತ್ತಿಸಲು ಅಧಿಕಾರಿಗಳಿಗೆ ಧೈರ್ಯ ಸಾಲಲಿಲ್ಲ. ಶಾಲೆಗಳಿಗೆ ಅ.19ರವರೆಗೆ ದಸರಾ ರಜೆ ವಿಸ್ತರಿಸಿದ ಸರ್ಕಾರ, ಶಾಲಾ ಬಸ್‌ಗಳ ಚಾಲಕರನ್ನು ಬಳಸಿ ದೂರ ಪ್ರಯಾಣದ ಬಸ್‌ಗಳನ್ನು ಓಡಿಸಲು ಪ್ರಯತ್ನ ಮಾಡಿತು.

ಕಾರ್ಮಿಕರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡದೇ ಕಸದ ಲಾರಿ ಓಡಿಸುವವರಿಗೆ ಸರ್ಕಾರಿ ಬಸ್‌ಗಳ ಸ್ಟೇರಿಂಗ್ ಕೊಟ್ಟಿರುವ ರಾಜ್ಯ ಸರ್ಕಾರ ಜನರ ಜೀವದ ಜೊತೆಗೆ ಚೆಲ್ಲಾಟವಾಡುತ್ತಿದೆ. ಇನ್ನೊಂದೆಡೆ ಹೈದರಾಬಾದ್‌ನಲ್ಲಿ ಕಸ ವಿಲೇವಾರಿ ವ್ಯವಸ್ಥೆ ಹಾಳಾಗುತ್ತಿದೆ ಎಂಬ ದೂರುಗಳು ಹೆಚ್ಚಾಗುತ್ತಿವೆ.

ತೀವ್ರಗೊಳ್ಳುತ್ತಿದೆ ಪ್ರತಿಭಟನೆ

ಪರ್ಯಾಯ ಚಾಲಕರನ್ನು ಹುಡುಕಿ ಕರೆತರುವ ಸರ್ಕಾರದ ಪ್ರಯತ್ನವನ್ನು ನಿಗಮದ ನೌಕರರು ತೀವ್ರವಾಗಿ ವಿರೋಧಿಸಿದ್ದಾರೆ.ಡಿಪೊ ಗೇಟ್‌ಗಳಿಗೆಅಡ್ಡಲಾಗಿ ಮಲಗಿ ಪ್ರತಿಭಟಿಸುವುದುನಿತ್ಯದ ವಿದ್ಯಮಾನವಾಗಿದೆ. ಖಮ್ಮಂ ನಗರ ಸೇರಿದಂತೆ ಹಲವೆಡೆ ಬಸ್ ಅಡ್ಡಗಟ್ಟಿ ಹಂಗಾಮಿಚಾಲಕರನ್ನು ಥಳಿಸಿದ ಪ್ರಕರಣಗಳೂ ವರದಿಯಾಗಿವೆ.ಈಗ ಸರ್ಕಾರಿ ಬಸ್‌ ಓಡಿಸಲು ಹಂಗಾಮಿ ಚಾಲಕರುಭಯಪಡುತ್ತಿದ್ದಾರೆ.

ಸಂಬಳ ಕೈಗೆ ಸಿಗದೆಹೈರಾಣಾದ ಕಾರ್ಮಿಕರು ಸರ್ಕಾರದ ಬಿಗಿ ನಿಲುವಿನಿಂದ ಕಂಗಾಲಾಗಿದ್ದಾರೆ. ಖಮ್ಮಂ ಡಿಪೊದ ಚಾಲಕ ಶ್ರೀನಿವಾಸ ರೆಡ್ಡಿ ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ಹೈದರಾಬಾದ್‌ನಲ್ಲಿ ನಿರ್ವಾಹಕ ಸುರೇಂದ್ರ ಗೌಡ ನೇಣು ಬಿಗಿದು ಆತ್ಮಹತ್ಯೆಮಾಡಿಕೊಂಡರು.

ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ2009ರಿಂದ 2013ರ ಅವಧಿಯಲ್ಲಿ ನಡೆಯುತ್ತಿದ್ದ ಹೋರಾಟಗಳ ಸಂದರ್ಭದಲ್ಲಿ ರಾಜ್ಯದಲ್ಲಿ ಸಂಭವಿಸುತ್ತಿದ್ದಪ್ರತಿ ಆತ್ಮಹತ್ಯೆ ಮತ್ತು ಬೆಂಕಿಹಚ್ಚಿಕೊಳ್ಳುವ ಪ್ರಕರಣವನ್ನು ಟಿಆರ್‌ಎಸ್ ತನ್ನ ಚಳವಳಿಯೊಂದಿಗೆ ತಳಕು ಹಾಕುತ್ತಿತ್ತು. ಆದರೆ ಈ ಬಾರಿ ಮಾತ್ರ ನಿಗಮದ ಇಬ್ಬರು ಸಿಬ್ಬಂದಿಯ ಆತ್ಮಹತ್ಯೆಯ ಬಗ್ಗೆ ಪಕ್ಷ ತುಟಿಕ್‌ಪಿಟಿಕ್ ಎನ್ನುತ್ತಿಲ್ಲ.ತೆಲಂಗಾಣ ರಾಜ್ಯಕ್ಕಾಗಿ ನಡೆಯುತ್ತಿದ್ದ ಹೋರಾಟದಲ್ಲಿ ಕೆಸಿಆರ್‌ ಜನಪ್ರಿಯಗೊಳಿಸಿದ್ದ ‘ವಂಟ ವರ್ಪು’ (ರಸ್ತೆಯಲ್ಲಿ ಅಡುಗೆ) ಚಳವಳಿಯನ್ನೂ ಕಾರ್ಮಿಕರು ಆರಂಭಿಸಿದ್ದಾರೆ. ತಮ್ಮ ಬದುಕು ಬೀದಿಪಾಲಾಗಿದೆ ಎಂದು ಸಾರಿ ಹೇಳುತ್ತಿದ್ದಾರೆ.

ಕೆಸಿಆರ್‌ ಜನಪ್ರಿಯತೆ ಕುಸಿತ

ಟಿಎಸ್‌ಆರ್‌ಟಿಸಿ ನೌಕರರೂ ಸೇರಿದಂತೆ ಇಡೀ ತೆಲಂಗಾಣ ಜನರು ತಮ್ಮ ‘ಭಾಗ್ಯ ವಿಧಾತ’ ಎಂದು ಗೌರವಿಸುತ್ತಿದ್ದ ಕೆಸಿಆರ್ ಜನಪ್ರಿಯತೆಯನ್ನು ಈ ಹೋರಾಟ ಮಂಕಾಗಿಸಿದೆ.

‘ಸಾರಿಗೆ ಉದ್ಯಮದಲ್ಲಿ ಕಾರ್ಯನಿರ್ವಹಣಾ ವೆಚ್ಚವೇ ಗಮನಾರ್ಹ ಪ್ರಮಾಣದಲ್ಲಿರುತ್ತೆ. ಟಿಆರ್‌ಟಿಸಿ ಕಾರ್ಯನಿರ್ವಹಣಾ ವೆಚ್ಚದಶೇ 35ರಷ್ಟು ಪಾಲನ್ನು ಡೀಸೆಲ್ ಖರೀದಿಯೇ ನುಂಗಿ ಹಾಕುತ್ತದೆ. ಇದನ್ನು ಮುಖ್ಯಮಂತ್ರಿ ಗಮನಿಸಬೇಕಿತ್ತು’ ಎಂದು ನಿಗಮದ ಹಿರಿಯ ಅಧಿಕಾರಿಗಳು ಖಾಸಗಿಯಾಗಿ ಅಸಮಾಧಾನ ತೋಡಿಕೊಳ್ಳುತ್ತಾರೆ.

ಆದರೆ ಕಳೆದ ವಾರ ಟಿಆರ್‌ಎಸ್‌ನ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ಕೆ.ಕೇಶವರಾವ್‌ ಟಿಎಸ್‌ಆರ್‌ಟಿಸಿ ಮತ್ತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಮಾತುಕತೆಗೆ ಮುಂದಾಗುವಂತೆ ಕೋರಿದ್ದಾರೆ. ಆದರೆ ಅವರ ಮನವಿಗೆ ಯಾವುದೇ ಬೆಲೆ ಸಿಕ್ಕಿಲ್ಲ. ಕೆಸಿಆರ್‌ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಮಾತುಗಳು ಈಗ ಪಕ್ಷದೊಳಗೇ ಕೇಳಿ ಬರುತ್ತಿವೆ.

ರಾಜ್ಯದಲ್ಲಿ ಜನರ ಸಂಕಷ್ಟ ಗಮನಿಸಿದ ಹೈಕೋರ್ಟ್, ‘ತಕ್ಷಣ ಮಾತುಕತೆ ನಡೆಸಿ’ ಎಂದು ಸರ್ಕಾರಕ್ಕೆ ಸೂಚಿಸಿತ್ತು.ರಾಜ್ಯಪಾಲರಾದ ತಮಿಳಿಸೈ ಸೌಂದರ್‌ರಾಜನ್ ತೆಲಂಗಾಣದ ಸಾರಿಗೆ ಸಚಿವ ಪುವ್ವಡ ಅಜಯ್‌ಕುಮಾರ್‌ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಪರಿಸ್ಥಿತಿ ನಿರ್ವಹಿಸಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಮಾಹಿತಿ ಪಡೆದುಕೊಂಡರು.ಇಷ್ಟೆಲ್ಲಾ ಆದ ನಂತರವೂಸರ್ಕಾರ ಮಾತುಕತೆಗೆ ಮುಂದಾಗಿಲ್ಲ.

ಮುಷ್ಕರಕ್ಕೆ ಜನರ ಬೆಂಬಲ

ಟಿಎಸ್‌ಆರ್‌ಟಿಸಿ ಕಾರ್ಮಿಕರು ಆರಂಭಿಸಿದ ಈ ಮುಷ್ಕರ ಈಗ ಕೇವಲ ಸರ್ಕಾರ ಮತ್ತು ಟಿಎಸ್‌ಆರ್‌ಟಿಸಿ ನಡುವಣ ವ್ಯವಹಾರವಾಗಿ ಉಳಿದಿಲ್ಲ.ಮುಷ್ಕರವನ್ನು ಬಲಪ್ರಯೋಗದಿಂದಹತ್ತಿಕ್ಕಲು ಸರ್ಕಾರ ನಡೆಸಿದ ಪ್ರಯತ್ನವನ್ನು ವಿರೋಧಿಸಲು ವಿದ್ಯಾರ್ಥಿಗಳು, ಶಿಕ್ಷಕರು, ವಕೀಲರು, ಸರ್ಕಾರಿ ಅಧಿಕಾರಿಗಳ ಜಂಟಿ ಕಾರ್ಯಪಡೆ ರಚನೆಯಾಗಿದೆ.

ಕೇವಲ ಒಂದು ವರ್ಷದ ಹಿಂದೆ ತೆಲಂಗಾಣದಲ್ಲಿ ಕೆಸಿಆರ್‌ ವಿರುದ್ಧ ಇಂಥದ್ದೊಂದು ಹೋರಾಟ ನಡೆಯಲಿದೆ ಎಂದು ಯಾರೂ ಊಹಿಸಲು ಸಾಧ್ಯವಿರಲಿಲ್ಲ. ರಾಜ್ಯ ವಿಧಾನಸಭೆಯ 119 ಸ್ಥಾನಗಳ ಪೈಕಿ 90 ಸ್ಥಾನಗಳಲ್ಲಿ ನಿರಾಯಾಸ ಜಯಗಳಿಸಿದ್ದ ಟಿಆರ್‌ಎಸ್‌ನ ಪಾರಮ್ಯ ಬಿರುಕುಬಿಡಲು ಇದೊಂದು ನೆಪವಾಗಬಹುದು ಎನ್ನುವ ಮಾತುಗಳು ಇದೀಗ ರಾಜ್ಯದಲ್ಲಿ ಕೇಳಿ ಬರುತ್ತಿವೆ.

ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಬದ್ಧತೆಯಿಂದ ಮತ್ತು ಶಾಂತಿಯುತವಾಗಿ ಹೋರಾಡುತ್ತಿದ್ದ ಕೆಸಿಆರ್‌ ಅವರನ್ನು ಜನರು‘ತೆಲಂಗಾಣದ ಗಾಂಧಿ’ ಎಂದು ಗೌರವಿಸುತ್ತಿದ್ದರು.ಆದರೆ ಕಳೆದ ಆರು ವರ್ಷಗಳ ಆಡಳಿತ ಈ ‘ಗಾಂಧಿ’ ಇಮೇಜ್‌ ಅನ್ನು ಸಂಪೂರ್ಣ ಹಾಳುಗೆಡವಿದೆ. ಪ್ರತಿಭಟನೆಗಳ ಸಂದರ್ಭ ಕೆಸಿಆರ್‌ ಅವರ ಪ್ರತಿಕೃತಿ ದಹಿಸುವುದು ಸಾಮಾನ್ಯ ಎಂಬಂತೆ ಆಗಿದೆ.

ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ರಾವ್ (ಕೆಸಿಆರ್)

ನಷ್ಟಕ್ಕೆ ಯಾರು ಕಾರಣ?

ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ತೆಲಂಗಾಣ ಸಾರಿಗೆ ನಿಗಮದ ನಷ್ಟಕ್ಕೆ ಅಸಮರ್ಥ ನೌಕರರೇ ಕಾರಣ ಎಂಬ ಅಭಿಪ್ರಾಯಕ್ಕೆ ಅಂಟಿಕೊಂಡಿದ್ದಾರೆ. ಆದರೆ ನಿಗಮದ ಸುಪರ್ದಿಯಲ್ಲಿರುವ ಸುಮಾರು ₹ 1 ಲಕ್ಷ ಕೋಟಿ ಮೌಲ್ಯದ ಆಸ್ತಿಯ ಮೇಲೆ ಕಣ್ಣಿಟ್ಟಿರುವ ಕೆಸಿಆರ್ ನಿಗಮವನ್ನು ಮುಳುಗಿಸಲು ಮುಂದಾಗಿದ್ದಾರೆ ಎಂದು ನೌಕರರ ಸಂಘಟನೆಗಳು ಆರೋಪಿಸುತ್ತವೆ.

ಮುಖ್ಯಮಂತ್ರಿಗೆ ಆಪ್ತರಾದ ಕೆಲ ಸಚಿವರುನಿಗಮಕ್ಕೆ ಸೇರಿದ ಸಾಕಷ್ಟು ಭೂಮಿಯನ್ನು ನಾಮಕವಾಸ್ತೆ ಬೆಲೆಗೆ 60 ವರ್ಷಕ್ಕೂ ಅಧಿಕ ಅವಧಿಗೆ ಭೋಗ್ಯಕ್ಕೆ ನೀಡಿದ್ದಾರೆ. ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಹುನ್ನಾರ ಎಡೆಬಿಡದೆ ಸಾಗಿದೆ. ಇದರ ಭಾಗವಾಗಿಯೇ ನೌಕರರು ಅಸಮರ್ಥರು ಎನ್ನುವ ವಾದವನ್ನು ಮುಖ್ಯಮಂತ್ರಿ ಹುಟ್ಟುಹಾಕಿದ್ದಾರೆ ಎಂದು ಜಂಟಿ ಕಾರ್ಯಪಡೆಯ ಅಧ್ಯಕ್ಷ ಅಶ್ವತ್ಥಾಮ ರೆಡ್ಡಿ ನೇರ ಆರೋಪ ಮಾಡುತ್ತಾರೆ.

ನಿಗಮದ ಏಕಸ್ವಾಮ್ಯ ಇರುವ ಮಾರ್ಗಗಳಲ್ಲಿ ಮೆಗಾ ಎಂಜಿನಿಯರಿಂಗ್‌ ಅಂಡ್ ಇನ್‌ಫ್ರಾಸ್ಟ್ರಕ್ಚರ್ (ಎಂಇಐಎಲ್‌) ಸಂಸ್ಥೆಯ ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸಲು ಅನುಮತಿ ನೀಡುವ ವಿಚಾರ ಈಗ ರಾಜ್ಯದಲ್ಲಿ ಚರ್ಚೆಗೆ ಬಂದಿದೆ. ಈ ಕಂಪನಿಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್‌ ರಾವ್ ಅವರ ಆಪ್ತ ಪಿ.ವಿ.ಕೃಷ್ಣಾರೆಡ್ಡಿ ಅವರಿಗೆ ಸೇರಿದ್ದು. ಈ ಆರೋಪಗಳಿಗೆ ಪುಷ್ಟಿ ನೀಡುವಂತೆ ಮುಖ್ಯಮಂತ್ರಿ ಕೆಸಿಆರ್‌ ನಿಗಮದ ಮರುನಿರ್ಮಾಣ ಯೋಜನೆಯನ್ನು ಪ್ರಕಟಿಸಿದ್ದಾರೆ. ಅದರಲ್ಲಿ ನಿಗಮ ಸುಪರ್ದಿಯಲ್ಲಿರುವ ಬಸ್‌ಗಳಲ್ಲಿ ಅರ್ಧದಷ್ಟು ಕಡಿಮೆ ಮಾಡುವ ವಿಚಾರ ಹಂಚಿಕೊಂಡಿದ್ದಾರೆ. ಖಾಸಗಿ ಸಂಸ್ಥೆಗಳ ಬಸ್‌ಗಳಿಗೆ ಈ ಮಾರ್ಗದಲ್ಲಿ ಸಂಚರಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಕೆಸಿಆರ್‌ ಹೇಳಿದ್ದಾರೆ.

‘ಕೆಸಿಆರ್‌ಗೆ ಮೊದಲಿನಿಂದಲೂ ನಿಗಮದ ಬಗ್ಗೆ ಅಂಥ ಆಸ್ಥೆ ಇಲ್ಲ’ ಎಂದು ಸಾಕಷ್ಟು ನೌಕರರು ಆರೋಪ ಮಾಡುತ್ತಾರೆ. ‘1996ರಲ್ಲಿ ಅವಿಭಜಿತ ಆಂಧ್ರ ಪ್ರದೇಶದಲ್ಲಿದ್ದ ಚಂದ್ರಬಾಬು ನಾಯ್ಡು ಸರ್ಕಾರದಲ್ಲಿ ಕೆಸಿಆರ್‌ ಸಾರಿಗೆ ಸಚಿವರಾಗಿದ್ದರು. ನಿಗಮದ ಹೈಟೆಕ್ ಬಸ್‌ಗಳಿಂದ ಪ್ರತಿ ಕಿ.ಮೀ. ₹ 2.60 ಸೇವಾ ತೆರಿಗೆ ಸಂಗ್ರಹಿಸಲಾಗುತ್ತಿತ್ತು. ಆದರೆ ಇದೇ ಅವಧಿಯಲ್ಲಿ ಖಾಸಗಿ ಕಂಪನಿಗಳ ಹೈಟೆಕ್‌ ಬಸ್‌ಗಳಿಂದ ಕೇವಲ ₹ 2 ಸೇವಾ ತೆರಿಗೆ ವಿಧಿಸಲಾಗುತ್ತಿತ್ತು. ಸರ್ಕಾರದ ಇಂಥ ಕ್ರಮಗಳಿಂದಲೇ ನಿಗಮ ನಷ್ಟಕ್ಕೆ ಜಾರಿತು’ ಎನ್ನುವ ವಾಕ್ಯಗಳಿರುವ ‘ಶೋಧಗಂಗಾ’ (ಸಂಶೋಧನಾ ನಿಯತಕಾಲಿಕೆ) ಸಂಚಿಕೆಯನ್ನು ನೌಕರರು ಮುಂದಿಡುತ್ತಾರೆ.

ಟಿಆರ್‌ಎಸ್‌ಗೆ ಹಿನ್ನಡೆ, ಬಿಜೆಪಿಗೆ ಲಾಭ

ಸಾರಿಗೆ ನಿಗಮದ ನೌಕರರ ಅನಿರ್ದಿಷ್ಟಾವಧಿ ಮುಷ್ಕರವು ವಿರೋಧ ಪಕ್ಷಗಳಿಗೆ ಮತ್ತೆಮುನ್ನೆಲೆಗೆ ಬರಲು ಸಾಕಷ್ಟು ಒಳದಾರಿಗಳನ್ನು ತೆರೆದುಕೊಟ್ಟಿದೆ. ಎರಡೂ ತೆಲುಗು ಭಾಷಿಕ ರಾಜ್ಯಗಳಲ್ಲಿ ಪ್ರಬಲವಾಗಲು ಹಾತೊರೆಯುತ್ತಿರುವ ಬಿಜೆಪಿಗೆ ಇದು ಸುವರ್ಣಾವಕಾಶವೂ ಹೌದು.ತೆಲಂಗಾಣದಲ್ಲಿ ಕೆಸಿಆರ್ ಈಗಾಗಲೇ ಕಾಂಗ್ರೆಸ್ ಮಟ್ಟಹಾಕಿದ್ದಾರೆ. ಕಾಂಗ್ರೆಸ್‌ ಅಸ್ತಿತ್ವ ಕಳೆದುಕೊಂಡ ರಾಜ್ಯದಲ್ಲಿ ತಲೆ ಎತ್ತಲು ಬಿಜೆಪಿಗೆ ಈ ಮುಷ್ಕರ ಒಂದು ವರದಾನವಾದರೂ ಅಚ್ಚರಿಯಿಲ್ಲ.

ಈ ಗದ್ದಲದ ನಡುವೆಯೇ ಕಳೆದ ಸೋಮವಾರ (ಅ.21) ನಡೆದ ಹುಜೂರ್‌ನಗರ್ ವಿಧಾನಸಭಾ ಉಪಚುನಾವಣೆಯಫಲಿತಾಂಶದತ್ತ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಇದನ್ನುರಾಜ್ಯದ ಜನರ ಮನೋ ಇಂಗಿತ ಬಿಂಬಿಸುವಫಲಿತಾಂಶ ಎಂಬಂತೆ ವ್ಯಾಖ್ಯಾನಿಸಲಾಗುತ್ತಿದೆ.

ಕಾಂಗ್ರೆಸ್‌ ನಾಯಕ ಎನ್‌.ಉತ್ತಮ ರೆಡ್ಡಿ ರಾಜೀನಾಮೆಯಿಂದ ತೆರವಾಗಿರುವ ಈ ಸ್ಥಾನ ಗೆಲ್ಲಲ ಟಿಆರ್‌ಎಸ್‌ ತನ್ನ ಬತ್ತಳಿಕೆಯಲ್ಲಿದ್ದ ಎಲ್ಲ ಅಸ್ತ್ರಗಳನ್ನು ಪ್ರಯೋಗಿಸಿತ್ತು. ಒಂದು ವೇಳೆ ಇಲ್ಲಿ ಟಿಆರ್‌ಎಸ್ ವಿಫಲವಾದರೆ ಮುಂದಿನ ಡಿಸೆಂಬರ್‌ ತಿಂಗಳಲ್ಲಿ ನಡೆಯಲಿರುವ ಸ್ಥಳೀಯ ನಗರಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಜಿದ್ದಿನ ಹೋರಾಟ ನೀಡುವ ಆತ್ಮವಿಶ್ವಾಸದಿಂದ ಮೈದುಂಬಿಕೊಳ್ಳುತ್ತದೆ ಎಂಬ ವಿಶ್ಲೇಷಣೆಗಳು ಚಾಲ್ತಿಯಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.