ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಅಧ್ಯಕ್ಷ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ತಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಪ್ರಕಟಿಸಿದ್ದಾರೆ.
119 ಸ್ಥಾನಗಳ ವಿಧಾನಸಭೆಗೆ ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಮೊದಲ ಪಟ್ಟಿಯಲ್ಲಿ 115 ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದೆ.
ಕೇವಲ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಬದಲಿಸಲಾಗಿದೆ. ಚುನಾವಣೆಯಲ್ಲಿ ಪಕ್ಷವು 95ರಿಂದ 105 ಸ್ಥಾನಗಳನ್ನು ಗೆಲ್ಲಲಿದೆ. ವಾರಂಗಲ್‌ನಲ್ಲಿ ಅಕ್ಟೋಬರ್ 16ರಂದು ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು ಎಂದು ಕೆಸಿಆರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹೈದರಾಬಾದ್ ಸಂಸದ ಒವೈಸಿ ಅಸಾದುದ್ದಿನ್ ನೇತೃತ್ವದ ಎಐಎಂಐಎಂ ಜತೆಗೆ ಪಕ್ಷದ ಮೈತ್ರಿ ಮುಂದುವರಿಯಲಿದೆ ಎಂದೂ ಕೆಸಿಆರ್ ಒತ್ತಿಹೇಳಿದ್ದಾರೆ.
ಕಾಮರೆಡ್ಡಿ ಮತ್ತು ಗಜ್ವೇಲ್ ಕ್ಷೇತ್ರಗಳಿಂದ ಸಿಎಂ ಕೆಸಿಆರ್ ಸ್ಪರ್ಧಿಸಲಿದ್ದು, ಅವರು ಪುತ್ರ, ಸಚಿವ ಕೆ.ಟಿ. ರಾಮರಾವ್ ಅವರು ಸಿರ್ಸಿಲ್ಲಾದಿಂದ ಕಣಕ್ಕಿಳಿಯಲಿದ್ದಾರೆ.
ತೆಲಂಗಾಣ ವಿಧಾನಸಭೆ ಚುನಾವಣೆಗೆ ಇನ್ನಷ್ಟೇ ದಿನಾಂಕ ಘೋಷಣೆಯಾಗಬೇಕಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಕೆ.ಚಂದ್ರಶೇಖರ್ ರಾವ್ ನಾಯಕತ್ವದ ಭಾರತ ರಾಷ್ಟ್ರ ಸಮಿತಿ ಪಕ್ಷ 88 ಸ್ಥಾನಗಳನ್ನು ಗೆದ್ದಿತ್ತು. ಉಳಿದಂತೆ ಕಾಂಗ್ರೆಸ್ 19 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.