ADVERTISEMENT

ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಕೇಂದ್ರ ಪುರಾವೆ ನೀಡಲಿ: ತೆಲಂಗಾಣ ಸಿಎಂ ಕೆಸಿಆರ್

ಐಎಎನ್ಎಸ್
Published 14 ಫೆಬ್ರುವರಿ 2022, 10:05 IST
Last Updated 14 ಫೆಬ್ರುವರಿ 2022, 10:05 IST
ತೆಲಂಗಾಣ ಸಿಎಂ ಕೆ.ಚಂದ್ರಶೇಖರ್‌ ರಾವ್
ತೆಲಂಗಾಣ ಸಿಎಂ ಕೆ.ಚಂದ್ರಶೇಖರ್‌ ರಾವ್   

ಹೈದರಾಬಾದ್‌: ಉಗ್ರರ ನೆಲೆಗಳ ಮೇಲೆ ನಡೆಸಿದ ನಿರ್ದಿಷ್ಟ ದಾಳಿಗೆ (ಸರ್ಜಿಕಲ್‌ ಸ್ಟ್ರೈಕ್‌) ಸಂಬಂಧಿಸಿದಂತೆ ಪುರಾವೆಗಳನ್ನು ತೋರಿಸುವಂತೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ (ಕೆಸಿಆರ್) ಕೇಂದ್ರ ಸರ್ಕಾರವನ್ನು ಕೇಳಿದ್ದಾರೆ.

ಸರ್ಜಿಕಲ್‌ ಸ್ಟ್ರೈಕ್‌ ಬಗ್ಗೆ ಸಾಕ್ಷ್ಯ ನೀಡುವಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೇಳಿರುವುದನ್ನು ಸಮರ್ಥಿಸಿಕೊಂಡಿರುವ ಅವರು, ತಾನೂ ಸಹ ಪುರಾವೆ ಕೇಳುತ್ತಿರುವುದಾಗಿ ಹೇಳಿದ್ದಾರೆ.

ಭಾನುವಾರ ರಾತ್ರಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, 'ರಾಹುಲ್‌ ಗಾಂಧಿ ಅವರು ಸರ್ಜಿಕಲ್‌ ಸ್ಟ್ರೈಕ್‌ಗಳ ಕುರಿತು ಸಾಕ್ಷ್ಯ ನೀಡುವಂತೆ ಕೇಳಿರುವುದರಲ್ಲಿ ತಪ್ಪಿಲ್ಲ. ಅದರಲ್ಲಿ ತಪ್ಪೇನು? ನಾನು ಅದನ್ನು ಈಗ ಕೇಳುತ್ತಿರುವೆ. ಭಾರತ ಸರ್ಕಾರವು ಪುರಾವೆಗಳನ್ನು ತೋರಿಸಲಿ' ಎಂದಿದ್ದಾರೆ.

ADVERTISEMENT

ಪುರಾವೆಗಳನ್ನು ತೋರಿಸುವುದು ಕೇಂದ್ರದ ಜವಾಬ್ದಾರಿಯಾಗಿದೆ ಎಂದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಮುಖ್ಯಸ್ಥ ಕೆ.ಚಂದ್ರಶೇಖರ್‌ ರಾವ್‌ ಹೇಳಿದ್ದಾರೆ.

'ಬಿಜೆಪಿಯು ಅಪಪ್ರಚಾರಗಳನ್ನು ನಡೆಸುತ್ತದೆ. ಹಾಗಾಗಿಯೇ ಜನರು ಸಾಕ್ಷ್ಯ ಕೇಳುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ನೀವು ಚಕ್ರಾಧಿಪತಿ ಅಥವಾ ರಾಜ ಆಗಲು ಸಾಧ್ಯವಿಲ್ಲ. ಸಂಸದ ಸ್ಥಾನದಲ್ಲಿರುವ ರಾಹುಲ್‌ ಗಾಂಧಿ ಅವರು ಸಾಕ್ಷ್ಯಗಳಿಗಾಗಿ ಕೇಳಿದ್ದಾರೆ. ಅವರಿಗೆ ಕೇಳುವ ಹಕ್ಕಿದೆ. ನೀವು ಅದಕ್ಕೆ ಪ್ರತಿಕ್ರಿಯಿಸಿ ಇಲ್ಲವೇ ನಿಶ್ಯಬ್ದರಾಗಿರಿ' ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.

2016ರಂದು ಉರಿ ಸೆಕ್ಟರ್‌ನಲ್ಲಿ ನಡೆದ ದಾಳಿಗೆ ಪ್ರತೀಕಾರವಾಗಿ ಭಾರತವು ಪಾಕಿಸ್ತಾನದ ನೆಲದಲ್ಲಿ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿ ಉಗ್ರರ ಕೇಂದ್ರಗಳನ್ನು ದ್ವಂಸ ಮಾಡಿರುವುದು ಸುದ್ದಿಯಾಗಿತ್ತು. ಆ ದಾಳಿಗೆ ಸಂಬಂಧಿಸಿದಂತೆ ಕೇಂದ್ರವು ಪುರಾವೆಗಳನ್ನು ಒದಗಿಸಬೇಕೆಂದು ವಿರೋಧ ಪಕ್ಷಗಳ ನಾಯಕರು ಒತ್ತಾಯಿಸಿದ್ದಾರೆ.

'ಖಂಡಿತವಾಗಿಯೂ ಅದೊಂದು ರಾಜಕೀಯ ತಂತ್ರವಾಗಿದ್ದು, ಅರ್ಧಕ್ಕೂ ಹೆಚ್ಚು ಭಾರತೀಯರಿಗೆ ಅದು ತಿಳಿದಿದೆ. ಯಾವಾಗ ಚುನಾವಣೆ ಸಮೀಪಿಸುತ್ತದೆಯೋ ಆಗೆಲ್ಲ ಗಡಿ ಭಾಗಗಳಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಯಾಗಿ ಆತಂಕ ಮೂಡಿಸಲಾಗುತ್ತದೆ ಹಾಗೂ ಅದನ್ನು ದೊಡ್ಡ ಮಟ್ಟದಲ್ಲಿ ಬಿಂಬಿಸಲಾಗುತ್ತದೆ' ಎಂದು ಚಂದ್ರಶೇಖರ್‌ ಆರೋಪಿಸಿದ್ದಾರೆ.

ಉತ್ತರಾಖಂಡ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಧ್ವಜಗಳ ಜೊತೆಗೆ ಸೇನಾ ಪಡೆಗಳ ಮುಖ್ಯಸ್ಥ ದಿವಂಗತ ಬಿಪಿನ್‌ ರಾವತ್‌ ಅವರ ಚಿತ್ರಗಳನ್ನು ಬಳಸಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಭಾರತೀಯ ಸೇನೆಯು ನಡೆಸಿರುವ ಸರ್ಜಿಕಲ್‌ ಸ್ಟ್ರೈಕ್‌ ಅನ್ನು ಬಿಜೆಪಿ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ. ಖಂಡಿತವಾಗಿಯೂ ರಾಹುಲ್‌ ಗಾಂಧಿ ಮತ್ತು ನಾನು ಪ್ರಶ್ನಿಸುತ್ತೇವೆ. ಇಡೀ ರಾಷ್ಟ್ರವೇ ಪ್ರಶ್ನಿಸಲಿದೆ' ಎಂದಿದ್ದಾರೆ.

ಬಿಜೆಪಿ ಆಡಳಿತದ ಅವಧಿಯಲ್ಲಿ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ನಡೆದಿದೆ. ಲಕ್ಷಾಂತರ ಕೋಟಿ ರೂಪಾಯಿಗಳನ್ನು ಬ್ಯಾಂಕ್‌ನಿಂದ ಅಕ್ರಮವಾಗಿ ಪಡೆದುಕೊಂಡಿರುವ ಆರ್ಥಿಕ ಅಪರಾಧಿಗಳು ದೇಶದಿಂದ ಪರಾರಿಯಾಗಿರುವುದನ್ನು ಸರ್ಕಾರವೇ ಒಪ್ಪಿಕೊಂಡಿದೆ. ರಫೇಲ್‌ ಒಪ್ಪಂದ ಸಹ ದೊಡ್ಡ ಮಟ್ಟದ ಭ್ರಷ್ಟಾಚಾರಕ್ಕೆ ಉದಾಹರಣೆಯಾಗಿದೆ ಎಂದ ಅವರು, ಇಂಡೊನೇಷ್ಯಾ 8 ಶತ ಕೋಟಿ ಡಾಲರ್‌ಗಳಲ್ಲಿ 42 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸಲು ಸಾಧ್ಯವಾದರೆ, 36 ಯುದ್ಧ ವಿಮಾನಗಳಿಗೆ ಭಾರತವು 9.74 ಶತ ಕೋಟಿ ಡಾಲರ್‌ ಪಾವತಿಸಿರುವುದು ಹೇಗೆ? ಅದನ್ನು ಮೋದಿ ಸರ್ಕಾರವು ವಿವರಿಸಲಿ. ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದಂತೆ ನಾನು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.