ADVERTISEMENT

ಪಶು ವೈದ್ಯೆ ಅತ್ಯಾಚಾರ, ಕೊಲೆ: ಆರೋಪಿಗಳ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 10:24 IST
Last Updated 30 ನವೆಂಬರ್ 2019, 10:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್: ದೇಶವೇ ಬೆಚ್ಚಿಬೀಳುವಂತೆ ಮಾಡಿದ್ದ ಪಶು ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳ ಪರವಾಗಿ ವಕಾಲತ್ತು ವಹಿಸದಿರಲು ತೆಲಂಗಾಣದ ರಂಗಾ ರೆಡ್ಡಿ ಜಿಲ್ಲಾ ಬಾರ್ ಕೌನ್ಸಿಲ್ ನಿರ್ಧರಿಸಿದೆ.

ಈ ಕುರಿತು ಶನಿವಾರ ನೋಟಿಸ್ ಜಾರಿಮಾಡಿದ್ದು, ರಂಗಾ ರೆಡ್ಡಿ ಜಿಲ್ಲಾ ಬಾರ್ ಅಸೋಸಿಯೇಷನ್‌ನ ಕಾರ್ಯಕಾರಿ ಸಮಿತಿಯು ನವೆಂಬರ್ 27ರಂದು ತೊಂಡಪಲ್ಲಿ ಟೋಲ್ ಪ್ಲಾಜಾದಲ್ಲಿ ನಡೆದ ಪಶುವೈದ್ಯೆಯ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತದೆ. ಈ ಮೂಲಕ ಸಮಿತಿ ಸದಸ್ಯರು ಯಾವುದೇ ಕಾರಣಕ್ಕೂ ಆರೋಪಿಗಳ ಪರವಾಗಿ ವಾದ ಮಾಡದಿರುವಂತೆ ಮನವಿ ಮಾಡುತ್ತದೆ ಎಂದು ಹೇಳಿದೆ.

ಪ್ರಕರಣದಲ್ಲಿ ಶೀಘ್ರವೇ ಸೂಕ್ತ ನ್ಯಾಯ ಒದಗಿಸಲು ತೆಲಂಗಾಣ ಸರ್ಕಾರವು ಕೂಡಲೇ ಪ್ರತ್ಯೇಕ ವಿಶೇಷ ನ್ಯಾಯಾಲಯವನ್ನು ತೆರೆಯಬೇಕು. ಅಮಾನವೀಯ ಹತ್ಯೆಯನ್ನು ಖಂಡಿಸಿ ಸಮಿತಿಯು ಡಿಸೆಂಬರ್ 2ರಂದು ಮಧ್ಯಾಹ್ನ 1.30ಕ್ಕೆ ನ್ಯಾಯಾಲಯದ ಪ್ರವೇಶದ್ವಾರದ ಮುಂಭಾಗ ಪ್ರತಿಭಟನೆ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ADVERTISEMENT

ರಂಗಾರೆಡ್ಡಿ ಜಿಲ್ಲಾ ಬಾರ್ ಕೌನ್ಸಿಲ್‌ಗೂ ಮುನ್ನ ಮುಹಬೂಬ್‌ನಗರ ಬಾರ್ ಕೌನ್ಸಿಲ್ ಕೂಡ ಆರೋಪಿಗಳ ಪರವಾಗಿ ಯಾವುದೇ ಕಾನೂನು ಹೋರಾಟ ನಡೆಸುವುದಿಲ್ಲ ಎಂದಿದೆ. ಅಲ್ಲದೆ ಸ್ಥಳೀಯ ನ್ಯಾಯಾಲಯದ ಶಾದ್‌ನಗರ ಬಾರ್ ಅಸೋಸಿಯೇಷನ್ ಕೂಡ ನಾಲ್ವರು ಅತ್ಯಾಚಾರ ಮತ್ತು ಕೊಲೆ ಆರೋಪಿಗಳ ಪರವಾಗಿ ಯಾವುದೇ ಕಾನೂನಿನ ಬೆಂಬಲಕ್ಕೆ ನಾವು ನಿಲ್ಲುವುದಿಲ್ಲ ಎಂದು ಹೇಳಿದೆ.

ಗುರುವಾರ ಮುಂಜಾನೆ ರಾಷ್ಟ್ರೀಯ ಹೆದ್ದಾರಿ 44ರ ಸೇತುವೆ ಅಡಿ ಸುಟ್ಟ ರೀತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ರಂಗಾರೆಡ್ಡಿ ಜಿಲ್ಲೆಯ ಶಂಶಾಬಾದ್ ಬಳಿಯಲ್ಲಿ ನಾಲ್ವರು ಆರೋಪಿಗಳಿಂದ ಅತ್ಯಾಚಾರಕ್ಕೊಳಗಾಗಿ ಹತ್ಯೆ ಮಾಡಲಾಗಿದೆ ಎನ್ನುವ ವಿಚಾರವು ಬೆಳಕಿಗೆ ಬಂದಿದೆ.

ಅತ್ಯಾಚಾರ ಮತ್ತು ಕೊಲೆ ಸಂಬಂಧಸೈಬರಾಬಾದ್ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಮೊಹಮ್ಮದ್ ಅರೀಫ್, ಜೊಲ್ಲು ಶಿವ, ಜೊಲ್ಲು ನವೀನ್ ಮತ್ತು ಚಿಂತಕುಂಟ ಚೆನ್ನಕೇಶವುಲು ಎಂದು ಗುರುತಿಸಲಾಗಿದೆ. 25 ವರ್ಷದ ಮೊಹಮ್ಮದ್ ಅರೀಫ್ ಘಟನೆಯ ಪ್ರಮುಖ ಆರೋಪಿಯಾಗಿದ್ದು, ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.