ADVERTISEMENT

Telangana Election: ಸೋನಿಯಾ ಗಾಂಧಿ –ರಾಹುಲ್ ಭೇಟಿಯಾದ ವೈ.ಎಸ್. ಶರ್ಮಿಳಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಆಗಸ್ಟ್ 2023, 7:40 IST
Last Updated 31 ಆಗಸ್ಟ್ 2023, 7:40 IST
<div class="paragraphs"><p>ವೈ.ಎಸ್‌. ಶರ್ಮಿಳಾ</p></div>

ವೈ.ಎಸ್‌. ಶರ್ಮಿಳಾ

   

–ಪಿಟಿಐ ಚಿತ್ರ

ನವದೆಹಲಿ: ವೈಎಸ್‌ಆರ್‌ ತೆಲಂಗಾಣ ಪಕ್ಷದ ಸಂಸ್ಥಾಪಕಿ ವೈ.ಎಸ್‌. ಶರ್ಮಿಳಾ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ದೆಹಲಿ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಇಂದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಉಭಯ ನಾಯಕರೊಂದಿಗೆ ಸಕಾರಾತ್ಮಕ ಚರ್ಚೆ ನಡೆದಿದೆ’ ಎಂದು ಹೇಳಿದ್ದಾರೆ.

ತೆಲಂಗಾಣದಲ್ಲಿ ಚಂದ್ರಶೇಖರ್ ರಾವ್ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲು ಕ್ಷಣಗಣನೆ ಆರಂಭವಾಗಿದೆ ಎಂದು ಶರ್ಮಿಳಾ ವಾಗ್ದಾಳಿ ನಡೆಸಿದರು.

ಶರ್ಮಿಳಾ ಅವರು ತಮ್ಮ ಪಕ್ಷವನ್ನು ಕಾಂಗ್ರೆಸ್‌ ಜೊತೆ ವಿಲೀನಗೊಳಿಸಲು ಮತ್ತು ತೆಲಂಗಾಣದಲ್ಲಿ ರಾಜಕೀಯವಾಗಿ ನೆಲೆ ಕಂಡುಕೊಳ್ಳಲು ಉತ್ಸುಕರಾಗಿದ್ದಾರೆ. ಆದರೆ, ರಾಜ್ಯದ ಕಾಂಗ್ರೆಸ್‌ ಘಟಕವು ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಶರ್ಮಿಳಾ ನೇರವಾಗಿ ಕಾಂಗ್ರೆಸ್ ಹೈಕಮಾಂಡ್ ಭೇಟಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತೆಲಂಗಾಣದಲ್ಲಿ ಶರ್ಮಿಳಾ ಹೊಂದಿರುವ ರಾಜಕೀಯ ಪ್ರಭಾವದ ಕುರಿತು ಕಾಂಗ್ರೆಸ್‌ನ ಕೇಂದ್ರ ನಾಯಕತ್ವಕ್ಕೆ ಅನುಮಾನವಿರುವ ಕಾರಣ ವೈಎಸ್‌ಆರ್‌ ತೆಲಂಗಾಣ ಪಕ್ಷವನ್ನು ಕಾಂಗ್ರೆಸ್‌ ಜೊತೆ ವಿಲೀನ ಮಾಡಿಕೊಳ್ಳುವ ದಿಸೆಯಲ್ಲಿ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದು ತಿಳಿದುಬಂದಿದೆ.

ತೆಲಂಗಾಣ ಕಾಂಗ್ರೆಸ್‌ ಅಧ್ಯಕ್ಷ ರೇವಂತ್‌ ರೆಡ್ಡಿ ಸೇರಿ ಪಕ್ಷದ ಹಲವು ಮುಖಂಡರು ಶರ್ಮಿಳಾ ಅವರ ಸೇರ್ಪಡೆಯನ್ನು ವಿರೋಧಿಸಿದ್ದಾರೆ. ಶರ್ಮಿಳಾ ಆಂಧ್ರಪ್ರದೇಶದವರು. ಅವರ ತಂದೆ, ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್‌. ರಾಜಶೇಖರ ರೆಡ್ಡಿ ಅವರು ತೆಲಂಗಾಣ ರಾಜ್ಯ ರಚನೆಯನ್ನು ವಿರೋಧಿಸಿದ್ದರು ಎಂದು ನಾಯಕರು ಹೇಳಿದ್ದಾರೆ.

ಶರ್ಮಿಳಾ ಅವರು ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಈಚೆಗೆ ಭೇಟಿಯಾಗಿದ್ದರು. ತದನಂತರ ಶರ್ಮಿಳಾ ಅವರ ಪಕ್ಷವು ಕಾಂಗ್ರೆಸ್‌ ಜೊತೆ ವಿಲೀನವಾಗುವ ಕುರಿತ ಊಹಾಪೋಹಗಳು ಹರಿದಾಡುತ್ತಿವೆ.

ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ಅವರ ತಂಗಿಯಾಗಿರುವ ಶರ್ಮಿಳಾ ಅವರು ಜಗನ್‌ ಮುಖ್ಯಸ್ಥರಾಗಿರುವ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದಿಂದ ಹೊರಬಂದು, 2021ರಲ್ಲಿ ವೈಎಸ್‌ಆರ್‌ ತೆಲಂಗಾಣ ಪಕ್ಷವನ್ನು ಸ್ಥಾಪಿಸಿದರು. ಬಳಿಕ, ಶರ್ಮಿಳಾ ತಾಯಿ ವಿಜಯಮ್ಮ ಅವರೂ ಮಗಳ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಬಿಆರ್‌ಎಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕೆಸಿಆರ್

ತೆಲಂಗಾಣ ರಾಜ್ಯದ ಮುಂಬರುವ ವಿಧಾನಸಭಾ ಚುನಾವಣೆಗೆ ಬಿಆರ್‌ಎಸ್‌ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪಕ್ಷದ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ (ಕೆಸಿಆರ್‌) ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ.

119 ಸ್ಥಾನಗಳ ವಿಧಾನಸಭೆಗೆ ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಮೊದಲ ಪಟ್ಟಿಯಲ್ಲಿ 115 ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದು, ಕಾಮರೆಡ್ಡಿ ಮತ್ತು ಗಜ್ವೇಲ್‌ ಕ್ಷೇತ್ರದಿಂದ ಕೆಸಿಆರ್‌ ಸ್ಪರ್ಧಿಸಲಿದ್ದಾರೆ.

ಕೇವಲ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಬದಲಿಸಲಾಗಿದೆ. ಚುನಾವಣೆಯಲ್ಲಿ ಪಕ್ಷವು 95ರಿಂದ 105 ಸ್ಥಾನಗಳನ್ನು ಗೆಲ್ಲಲಿದೆ. ವಾರಂಗಲ್‌ನಲ್ಲಿ ಅಕ್ಟೋಬರ್ 16ರಂದು ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು ಎಂದು ಕೆಸಿಆರ್‌ ತಿಳಿಸಿದ್ದಾರೆ.

ಹೈದರಾಬಾದ್‌ ಸಂಸದ ಒವೈಸಿ ಅಸಾದುದ್ದಿನ್ ನೇತೃತ್ವದ ಎಐಎಂಐಎಂ ಜತೆಗೆ ಪಕ್ಷದ ಮೈತ್ರಿ ಮುಂದುವರಿಯಲಿದೆ ಎಂದೂ ಕೆಸಿಆರ್‌ ಒತ್ತಿಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.