ADVERTISEMENT

ಎನ್‌ಕೌಂಟರ್: ತನಿಖೆಗೆ ‘ಸುಪ್ರೀಂ’ ಆಯೋಗ

ಪಿಟಿಐ
Published 12 ಡಿಸೆಂಬರ್ 2019, 20:00 IST
Last Updated 12 ಡಿಸೆಂಬರ್ 2019, 20:00 IST
   

ನವದೆಹಲಿ: ಹೈದರಾಬಾದ್‌ನ ಪಶುವೈದ್ಯೆ ಮೇಲಿನ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ ಘಟನೆಯ ವಿಚಾರಣೆ ನಡೆಸಲು ಮೂವರು ಸದಸ್ಯರು ತನಿಖಾ ಆಯೋಗವನ್ನು ಸುಪ್ರೀಂ ಕೋರ್ಟ್ ಗುರುವಾರ ರಚಿಸಿದೆ.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಎಸ್.ಸಿರ್‌ಪುರ್‌ಕರ್‌ ಅವರಿಗೆ ತನಿಖಾ ತಂಡದ ನೇತೃತ್ವ ವಹಿಸಲಾಗಿದೆ. ಎನ್‌ಕೌಂಟರ್‌ಗೆ ಕಾರಣವಾದ ಅಂಶಗಳನ್ನು ಪತ್ತೆಹಚ್ಚಿ ವರದಿ ನೀಡಲು 6 ತಿಂಗಳ ಕಾಲಾವಕಾಶ ನೀಡಲಾಗಿದೆ.

ಬಾಂಬೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರೇಖಾ ಬಲ್ಡೋಟಾ ಮತ್ತು ಸಿಬಿಐ ಮಾಜಿ ನಿರ್ದೇಶಕ ಡಿ.ಆರ್. ಕಾರ್ತಿಕೇಯನ್ ಅವರು ಆಯೋಗದ ಇತರ ಸದಸ್ಯರು.

ADVERTISEMENT

ತೆಲಂಗಾಣ ಹೈಕೋರ್ಟ್ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಲ್ಲಿ (ಎನ್‌ಎಚ್‌ಆರ್‌ಸಿ) ಈಗಾಗಲೇ ನಡೆಯುತ್ತಿರುವ ತನಿಖೆಗೆ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್‌.ಎ. ಬೊಬಡೆ ನೇತೃತ್ವದ ಪೀಠ ತಡೆ ನೀಡಿದೆ. ತ್ರಿಸದಸ್ಯ ಆಯೋಗದ ತನಿಖೆ ಪೂರ್ಣಗೊಳ್ಳುವವರೆಗೆ ಯಾವುದೇ ಪ್ರಾಧಿಕಾರಗಳು ತನಿಖೆ ನಡೆಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

ಮೂವರು ಸದಸ್ಯರ ಆಯೋಗಕ್ಕೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಭದ್ರತೆ ಒದಗಿಸಬೇಕು ಎಂದು ನ್ಯಾಯಮೂರ್ತಿಗಳಾದ ಎಸ್‌.ಎ. ನಜೀರ್ ಹಾಗೂ ಸಂಜೀವ್ ಖನ್ನಾ ಅವರನ್ನೊಳಗೊಂಡ ಪೀಠ ನಿರ್ದೇಶಿಸಿದೆ.

ಡಿಸೆಂಬರ್ 6ರಂದು ನಡೆದ ಎನ್‌ಕೌಂಟರ್ ಸಂಬಂಧ ತನಿಖೆ ನಡೆಸಲು ತ್ರಿಸದಸ್ಯ ಆಯೋಗಕ್ಕೆ ಎಲ್ಲ ಅಧಿಕಾರವನ್ನು ನೀಡಲಾಗಿದ್ದು, ವಿಚಾರಣೆ ಆರಂಭವಾಗುವ ಮೊದಲ ದಿನದಿಂದ ಆರು ತಿಂಗಳ ಒಳಗಾಗಿ ವರದಿ ನೀಡಬೇಕಿದೆ.

ಪೊಲೀಸ್ ಆಯುಕ್ತರ ಶ್ರೇಣಿಯ ಅಧಿಕಾರಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವು (ಎಸ್‌ಐಟಿ) ಎನ್‌ಕೌಂಟರ್ ಪ್ರಕರಣದ ವಿಚಾರಣೆ ನಡೆಸಿ ವರದಿ ಸಲ್ಲಿಸಲಿದೆ ಎಂಬ ಮಾಹಿತಿಯನ್ನು ತೆಲಂಗಾಣ ರಾಜ್ಯ ಸರ್ಕಾರದ ಪರವಾಗಿ ಹಾಜರಿದ್ದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಪೀಠದ ಎದುರು ಇಟ್ಟರು.

‘ಪಶುವೈದ್ಯೆಯ ಮೇಲೆ ಅತ್ಯಾಚಾರ ಎಸಗಿ, ದೇಹವನ್ನು ಸುಟ್ಟು ಹಾಕಿದ್ದ ಜಾಗದಲ್ಲಿ ಪರಿಶೀಲನೆ ನಡೆಸುವ ಸಲುವಾಗಿ ನಾಲ್ವರು ಆರೋಪಿಗಳನ್ನು ಪೊಲೀಸರು ಅಲ್ಲಿಗೆ ಕರೆದೊಯ್ದಾಗ ಅವರು ಪೊಲೀಸರ ಹತ್ಯೆಗೆ ಯತ್ನಿಸಿದ್ದರು. ಈ ಬಗ್ಗೆ ಎಸ್‌ಐಟಿ ತನಿಖೆ ನಡೆಸುತ್ತಿದೆ’ ಎಂದು ಪೀಠದ ಗಮನಕ್ಕೆ ತರಲಾಯಿತು.

‘ನಾಲ್ವರು ಆರೋಪಿಗಳ ಹತ್ಯೆಗೆ ಕಾರಣವಾದ ಎನ್‌ಕೌಂಟರ್ ಬಗ್ಗೆ ಗೊಂದಲಕಾರಿ ಅಂಶಗಳು ವರದಿಯಾಗಿದ್ದು,ಘಟನೆಯ ಸತ್ಯಾಸತ್ಯತೆ ಅರಿಯಲು ನಿಷ್ಪಕ್ಷಪಾತ ಹಾಗೂ ಸ್ವತಂತ್ರ ತನಿಖೆ ಆಗಬೇಕಿದೆ. ಹೀಗಾಗಿ ಸ್ವತಂತ್ರ ತನಿಖಾ ಆಯೋಗದ ರಚನೆ ಅಗತ್ಯ’ ಎಂದು ನ್ಯಾಯ ಪೀಠ ಅಭಿಪ್ರಾಯಪಟ್ಟಿತು.

ಅಪರಾಧ ಕೃತ್ಯದ ಮರುಸೃಷ್ಟಿ ಮಾಡಲು ಘಟನಾ ಸ್ಥಳಕ್ಕೆ ಆರೋಪಿಗಳನ್ನು ಪೊಲೀಸರು ಕರೆದೊಯ್ದ ವೇಳೆ ಎನ್‌ಕೌಂಟರ್ ನಡೆದಿತ್ತು. ಪಶುವೈದ್ಯೆಯ ಸುಟ್ಟು ಕರಕಲಾದ ಮೃತದೇಹ ಪತ್ತೆಯಾಗಿದ್ದ ಹೈದರಾಬಾದ್ ಸಮೀಪದ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಆರೋಪಿಗಳು ಹತರಾಗಿದ್ದಾರೆ ಎಂದು ತೆಲಂಗಾಣ ಪೊಲೀಸರು ಪ್ರತಿಪಾದಿಸಿದ್ದರು.

***

ನಿಷ್ಪಕ್ಷಪಾತ ತನಿಖೆಗೆ ಸ್ವತಂತ್ರ ಆಯೋಗ ರಚಿಸಿದ ಸುಪ್ರೀಂ ಕೋರ್ಟ್

ತನಿಖೆ ಪೂರ್ಣಗೊಳಿಸಲು 6 ತಿಂಗಳ ಗುಡುವು

ಈ ಅವಧಿಯಲ್ಲಿ ಬೇರಾವುದೇ ಸಂಸ್ಥೆ ತನಿಖೆ ನಡೆಸುವಂತಿಲ್ಲ

***

‘ಪೊಲೀಸರಿಗೆ ಶಿಕ್ಷಿಸುವ ಅಧಿಕಾರವಿಲ್ಲ‘

ಪೊಲೀಸ್ ಕ್ರಮದ ವಿರುದ್ಧ ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ಎರಡು ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದವು. ವಕೀಲರಾದ ಜಿ.ಎಸ್ ಮಣಿ, ಪ್ರದೀಪ್ ಕುಮಾರ್ ಯಾದವ್ ಮತ್ತು ಎಂ.ಎಲ್. ಶರ್ಮಾ ಎಂಬುವರು ತನಿಖೆಗೆ ಕೋರಿದ್ದರು.

‘ಪೊಲೀಸರು ನಡೆಸಿದ ಎನ್‌ಕೌಂಟರ್ ನಕಲಿಯಾಗಿದ್ದು, ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು’ ಎಂದು ಮಣಿ ಹಾಗೂ ಯಾದವ್ ಆಗ್ರಹಿಸಿದ್ದಾರೆ. ‘ಅಮಾಯಕ ಯುವತಿಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಆರೋಪಿಗಳನ್ನು ಯಾರೂ ಬೆಂಬಲಿಸುತ್ತಿಲ್ಲ. ಆದರೂ ಆರೋಪಿಗಳನ್ನು ನ್ಯಾಯಾಲಯದ ಸುಪರ್ದಿಗೆ ಒಪ್ಪಿಸುವ ಬದಲು, ಹಿರಿಯ ಪೊಲೀಸ್ ಅಧಿಕಾರಿಗಳು ಕಾನೂನು ಕೈಗೆತ್ತಿಕೊಂಡು ನಕಲಿ ಎನ್‌ಕೌಂಟರ್‌ನಲ್ಲಿ ಅವರನ್ನು ಹತ್ಯೆ ಮಾಡಿದ್ದಾರೆ’ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

‘ಕಾನೂನು ಪ್ರಕ್ರಿಯೆ ಮುಗಿಯದ ಹೊರತು, ಪೊಲೀಸರು ಸೇರಿದಂತೆ ಯಾವುದೇ ತನಿಖಾ ಸಂಸ್ಥೆಗೆ ಶಿಕ್ಷಿಸುವ ಅಧಿಕಾರ ಇಲ್ಲ. ಮುಕ್ತ ಮತ್ತು ನ್ಯಾಯಸಮ್ಮತ ವಿಚಾರಣೆಯ ಬಳಿಕ ಅಪರಾಧಿಗಳನ್ನು ಗುರುತಿಸಿ ಅವರಿಗೆ ಜೈಲು ಶಿಕ್ಷೆ ಅಥವಾ ಮರಣದಂಡನೆ ನೀಡುವ ಅಧಿಕಾರ ಇರುವುದು ನ್ಯಾಯಾಲಯಕ್ಕೆ ಮಾತ್ರ’ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.

21 ದಿನದಲ್ಲಿ ಇತ್ಯರ್ಥಕ್ಕೆ ಮಸೂದೆ

ಅಮರಾವತಿ: ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ವಿಚಾರಣೆ ನಡೆಸಿ, ತೀರ್ಪು ನೀಡಲು 21 ದಿನಗಳ ಗಡುವು ವಿಧಿಸುವ ಕರಡು ಮಸೂದೆಗೆ ಆಂಧ್ರ ಪ್ರದೇಶ ಸಚಿವ ಸಂಪುಟ ಸಭೆ ಬುಧವಾರ ಒಪ್ಪಿಗೆ ನೀಡಿದೆ.

ಆಂಧ್ರ ಪ್ರದೇಶ ಕ್ರಿಮಿನಲ್ ಕಾನೂನಿಗೆ ತಿದ್ದುಪಡಿ ತರಲಾಗುತ್ತಿದ್ದು, ಇನ್ನುಮುಂದೆ ‘ಎಪಿ ದಿಶಾ ಕಾಯ್ದೆ’ ಎಂದು ಕರೆಯಲಾಗುತ್ತದೆ. ಪಕ್ಕದ ರಾಜ್ಯ ತೆಲಂಗಾಣದಲ್ಲಿ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆಗೆ ಒಳಗಾದ ಪಶುವೈದ್ಯೆ ಹೆಸರಿನಲ್ಲಿ ಕಾಯ್ದೆಗೆ ಮರುನಾಮಕರಣ ಮಾಡಲು ನಿರ್ಧರಿಸಲಾಗಿದೆ. ಪಶುವೈದ್ಯೆಯನ್ನು ‘ದಿಶಾ’ ಎಂದು ಹೆಸರಿಸಲಾಗಿದೆ. ಈ ಕಾಯ್ದೆಯಡಿ ಅತ್ಯಾಚಾರಕ್ಕೆ ಗಲ್ಲುಶಿಕ್ಷೆ ನಿಗದಿಪಡಿಸುವ ಪ್ರಸ್ತಾವವಿದೆ.

ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಲು ದಾರಿ ಮಾಡಿಕೊಡುವ ಕರಡು ಮಸೂದೆಗೂ ಸಂಪುಟ ಒಪ್ಪಿಗೆ ನೀಡಿದ್ದು, ಈ ಎರಡೂ ಮಸೂದೆಗಳು ಹಾಲಿ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ.

ಮೆರವಣಿಗೆಗೆ ತಡೆ

ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಸದಸ್ಯರು ದೆಹಲಿಯಲ್ಲಿ ಗುರುವಾರ ಮೆರವಣಿಗೆ ನಡೆಸಿದರು.

ರಾಜಘಾಟ್‌ನಿಂದ ಆರಂಭವಾದ ಜಾಥಾಕ್ಕೆ ಐಟಿಒನಲ್ಲಿ ಪೊಲೀಸರು ತಡೆ ಒಡ್ಡಿದರು. ನಿರ್ಭಯಾ ಪ್ರಕರಣದ ಅತ್ಯಾಚಾರಗಳು ಇನ್ನೂ ಜೀವಂತವಾಗಿರುವುದು ನಾಚಿಕೆಗೇಡು ಎಂದು ಪ್ರತಿಭಟನಕಾರರು ಘೋಷಣೆ ಕೂಗಿದರು.

ಮೆರವಣಿಗೆಗೆ ತಡೆ ಒಡ್ಡಿದ ಪೊಲೀಸರು ತಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ಪ್ರತಿಭಟನಕಾರರು ಆರೋಪಿಸಿದರು. ಆದರೆ ಈ ಆರೋಪವನ್ನು ಪೊಲೀಸರು ಅಲ್ಲಗಳೆದಿದ್ದಾರೆ. ಸಂಸತ್ ಅಧಿವೇಶನ ನಡೆಯುತ್ತಿದ್ದು, ಮೆರವಣಿಗೆಗೆ ಜಂತರ್‌ ಮಂತರ್‌ನಲ್ಲಿ ತಡೆ ಒಡ್ಡುವುದಾಗಿ ಪೊಲೀಸರು ಮೊದಲೇ ತಿಳಿಸಿದ್ದರು.

***

ಹಿಂದಿನ ಎಸ್‌ಪಿ ಸರ್ಕಾರದ ಅವಧಿಯಲ್ಲಿ ದಾರಿ ತಪ್ಪಿದ್ದ ಮಕ್ಕಳು ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದಾರೆ
- ರಾಜೇಂದ್ರ ಪ್ರತಾಪ್ ಸಿಂಗ್, ಉತ್ತರ ಪ್ರದೇಶದ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.