ಹೈದರಾಬಾದ್: ರೇವಂತ್ ರೆಡ್ಡಿ ಸಂಪುಟದಲ್ಲಿ ಸ್ಥಾನ ಪಡೆದಿರುವ ಮುಲುಗು ಮೀಸಲು ಕ್ಷೇತ್ರದ ಶಾಸಕಿ ದನಸಾರಿ ಅನಸೂಯ ಅಲಿಯಾಸ್ ಸೀತಕ್ಕ ಅವರು ಸಾಗಿ ಬಂದ ಹಾದಿಯು ಕುತೂಹಲಕಾರಿಯಾಗಿದೆ. ಈ ಕ್ಷೇತ್ರದಿಂದ ಮೂರು ಬಾರಿ ಶಾಸಕಿಯಾಗಿ ಆಯ್ಕೆ ಆಗಿರುವ ಅವರು ಮಾಜಿ ನಕ್ಸಲ್. ಅವರು ಕಮಾಂಡರ್ ಆಗಿ ನಕ್ಸಲ್ ಪಡೆಗಳನ್ನು ಮುನ್ನಡೆಸಿದ್ದರು.
1987ರಲ್ಲಿ 14 ವರ್ಷದ ಬಾಲಕಿಯಾಗಿದ್ದಾಗಲೇ ಜನಶಕ್ತಿ ನಕ್ಸಲ್ ಪಡೆ ಸೇರಿದ ಅವರು, 1997ರಲ್ಲಿ ಪೊಲೀಸರೆದುರು ಶರಣಾದರು. ಬಳಿಕ ಕಾನೂನು ವ್ಯಾಸಂಗ ಮಾಡಿ, 2004ರಲ್ಲಿ ತೆಲುಗುದೇಶಂ ಪಕ್ಷ ಸೇರುವ ಮೂಲಕ ರಾಜಕೀಯ ಪ್ರವೇಶಿಸಿದರು. ಮುಲುಗು ಕ್ಷೇತ್ರದಿಂದಲೇ ಮೊದಲ ಬಾರಿಗೆ ಕಣಕ್ಕಿಳಿದ ಅವರು ಸೋಲು ಅನುಭವಿಸಿದರು. 2009ರಲ್ಲಿ ಅದೇ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು.
2014ರ ವಿಧಾನಸಭೆ ಚುನಾವಣೆಯಲ್ಲಿ ಪುನಃ ಸೋಲುಂಡ ಅವರು, 2017ರಲ್ಲಿ ರೇವಂತ್ ರೆಡ್ಡಿ ಅವರ ಜೊತೆ ಟಿಡಿಪಿ ತೊರೆದು ಕಾಂಗ್ರೆಸ್ ಸೇರಿದರು. ನಂತರ, 2018 ಮತ್ತು 2023ರ ಚುನಾವಣೆಯಲ್ಲಿ ಸತತ ಗೆಲುವು ದಾಖಲಿಸಿದರು. ಕೋವಿಡ್– 19 ಸಾಂಕ್ರಾಮಿಕದ ಸಮಯದಲ್ಲಿ ಮಾಡಿದ ಉತ್ತಮ ಕೆಲಸಗಳಿಂದ ಮತ್ತಷ್ಟು ಪ್ರಸಿದ್ಧಿ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.