ADVERTISEMENT

ತೆಲಂಗಾಣ: ರೈತರ ₹2 ಲಕ್ಷದವರೆಗಿನ ಸಾಲ ಮನ್ನಾ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 16:20 IST
Last Updated 15 ಜುಲೈ 2024, 16:20 IST
   

ಹೈದರಾಬಾದ್: ತೆಲಂಗಾಣದ ಕಾಂಗ್ರೆಸ್ ಸರ್ಕಾರವು ತನ್ನ ಕೃಷಿ ಸಾಲ ಮನ್ನಾ ಯೋಜನೆ ಜಾರಿಗೆ ತರಲು ಬಹು ನಿರೀಕ್ಷಿತ ಮಾರ್ಗಸೂಚಿಗಳನ್ನು ಸೋಮವಾರ ಪ್ರಕಟಿಸಿದೆ.

ಈ ಮಾರ್ಗಸೂಚಿಗಳ ಪ್ರಕಾರ, ರೈತರು 2018ರ ಡಿಸೆಂಬರ್ 12 ಮತ್ತು 2023ರ ಡಿಸೆಂಬರ್ 9ರ ಅವಧಿಯ ನಡುವೆ ಪಡೆದಿರುವ ₹2 ಲಕ್ಷದವರೆಗಿನ ಕೃಷಿ ಸಾಲದ ಮನ್ನಾಕ್ಕೆ ಅರ್ಹರಾಗಿರುತ್ತಾರೆ.

ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ಪಕ್ಷವು ಆರು ಗ್ಯಾರಂಟಿಗಳನ್ನು ನೀಡುವ ಭರವಸೆಯ ಜತೆಗೆ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿತ್ತು. ಲೋಕಸಭೆ ಚುನಾವಣೆ ವೇಳೆ ಕೃಷಿ ಸಾಲ ಮನ್ನಾ ಯೋಜನೆ ಜಾರಿ ವಿಳಂಬವಾಗುತ್ತಿದ್ದಂತೆ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ ಅವರು ಆಗಸ್ಟ್‌ನೊಳಗೆ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದರು.

ADVERTISEMENT

ಸರ್ಕಾರ ಕಲೆಹಾಕಿದ ಮಾಹಿತಿ ಪ್ರಕಾರ ತೆಲಂಗಾಣದಲ್ಲಿ ಸುಮಾರು 47 ಲಕ್ಷ ರೈತರು ಕೃಷಿ ಸಾಲ ಮಾಡಿದ್ದಾರೆ. ಅದರಲ್ಲಿ ಬಹುತೇಕ ಮಂದಿ ₹1 ಲಕ್ಷಕ್ಕಿಂತ ಕಡಿಮೆ ಸಾಲ ಹೊಂದಿದ್ದಾರೆ. ಸಾಲ ಮನ್ನಾ ಯೋಜನೆ ಜಾರಿಗೆ ಸರ್ಕಾರಕ್ಕೆ ಕನಿಷ್ಠ ₹35 ಸಾವಿರ ಕೋಟಿ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

ಮಾರ್ಗಸೂಚಿಯ ಪ್ರಕಾರ ಪ್ರತಿ ಕುಟುಂಬದ ಒಂದು ಸಾಲ ಮಾತ್ರ ಮನ್ನಾ ಆಗಲಿದೆ. ₹2 ಲಕ್ಷಕ್ಕಿಂತ ಹೆಚ್ಚಿನ ಸಾಲ ಪಡೆದಿರುವ ಕುಟುಂಬಗಳು ಸಾಲ ಮನ್ನಾ ಯೋಜನೆಗೆ ಅರ್ಹತೆ ಪಡೆಯಲು ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.