ADVERTISEMENT

ಪಠ್ಯಪುಸ್ತಕಗಳಲ್ಲಿ ಮಾಜಿ ಸಿಎಂ ಹೆಸರು; ತೆಲಂಗಾಣ ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರ

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 15:00 IST
Last Updated 14 ಜೂನ್ 2024, 15:00 IST
<div class="paragraphs"><p>ಕೆ. ಚಂದ್ರಶೇಖರ ರಾವ್,&nbsp;ರೇವಂತ ರೆಡ್ಡಿ</p></div>

ಕೆ. ಚಂದ್ರಶೇಖರ ರಾವ್, ರೇವಂತ ರೆಡ್ಡಿ

   

ಹೈದರಾಬಾದ್‌: ತೆಲಂಗಾಣದ ಶಾಲೆಗಳಲ್ಲಿ ವಿತರಿಸಲಾಗಿರುವ ಪಠ್ಯಪುಸ್ತಕಗಳಲ್ಲಿ ಹಿಂದಿನ ವರ್ಷದ ಮುನ್ನಡಿಯನ್ನೇ ಬಳಸಲಾಗಿದ್ದು, ಕೆ.ಚಂದ್ರಶೇಖರ್‌ (ಕೆಸಿಆರ್‌) ಅವರನ್ನೇ 'ಮುಖ್ಯಮಂತ್ರಿ' ಎಂದು ಉಲ್ಲೇಖಿಸಲಾಗಿದೆ. ಇದರಿಂದ ಸದ್ಯ ಆಧಿಕಾರದಲ್ಲಿರುವ ಕಾಂಗ್ರೆಸ್‌ ಸರ್ಕಾರಕ್ಕೆ ಭಾರಿ ಮುಜುಗರ ಉಂಟಾಗಿದೆ.

ಬೇಸಿಗೆ ರಜೆಯ ನಂತರ ಜೂನ್‌ 12ರಂದು ಶಾಲೆಗಳು ಆರಂಭವಾಗಿವೆ. ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿವರೆಗೆ ಓದುತ್ತಿರುವ ಮಕ್ಕಳಿಗೆ ವಿತರಿಸಿರುವ ಪುಸ್ತಕಗಳಲ್ಲಿ ಹಳೇ ಮುನ್ನುಡಿಯನ್ನೇ ಬಳಲಾಗಿದೆ.

ADVERTISEMENT

ಪಠ್ಯಪುಸ್ತಕಗಳನ್ನು ಹಿಂದಿರುಗಿಸಬೇಕು ಎಂದು ಅಧಿಕಾರಿಗಳು ಆರಂಭದಲ್ಲಿ ಶಾಲೆಗಳಿಗೆ ಸೂಚಿಸಿದ್ದರು. ಇದೀಗ, ಮುನ್ನುಡಿ ಪುಟದ ಪರಿಷ್ಕೃತ ಮಾಹಿತಿಯನ್ನು ಅಂಟಿಸುವಂತೆ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೆಲವು ತಿದ್ದುಪಡಿ ಬಾಕಿ ಇರುವುದರಿಂದಾಗಿ, ಹಳೇ ಮಾಹಿತಿ ಇರುವ ನಿರ್ದಿಷ್ಟ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿಲ್ಲ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

'ಈ ಬಗ್ಗೆ ತನಿಖೆ ನಡೆಸಿ, ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು' ಎಂದು ತೆಲಂಗಾಣ ರಾಜ್ಯ ಯುನೈಟೆಡ್ ಟೀಚರ್ಸ್ ಫೆಡರೇಷನ್‌ ಸರ್ಕಾರವನ್ನು ಒತ್ತಾಯಿಸಿದೆ.

ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎಸ್‌ಸಿಇಆರ್‌ಟಿ) ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿಯೇ ಈ ಲೋಪ ಆಗಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಚಾವಾ ರವಿ ಆರೋಪಿಸಿದ್ದಾರೆ.

ಕಳೆದ ವರ್ಷ ಶಾಲಾ ಪಠ್ಯಪುಸ್ತಗಳ ಮುಖಪುಟದಲ್ಲಿ ಸೇರಿಸಲಾಗಿದ್ದ ಸಂವಿಧಾನದ ಮುನ್ನುಡಿಯಲ್ಲಿ 'ಸಮಾಜವಾದ' ಮತ್ತು 'ಜಾತ್ಯತೀತ' ಪದಗಳನ್ನು ಕೈಬಿಡಲಾಗಿತ್ತು ಎಂದೂ ಸ್ಮರಿಸಿದ್ದಾರೆ.

ಕೆಸಿಆರ್‌ ಹೆಸರಿರುವುದಕ್ಕೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವಿತರಿಸಲು ಉದ್ದೇಶಿಸಿದ್ದ ಪಠ್ಯಪುಸ್ತಕಗಳನ್ನು ಕಾಂಗ್ರೆಸ್‌ ಸರ್ಕಾರ ಹಿಂಪಡೆದಿದೆ ಎಂದು ಪ್ರತಿಪಕ್ಷ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ಕಾಂಗ್ರೆಸ್‌ ನಾಯಕ ರೇವಂತ ರೆಡ್ಡಿ ಅವರು ಸದ್ಯ ತೆಲಂಗಾಣದ ಮುಖ್ಯಮಂತ್ರಿಯಾಗಿದ್ದಾರೆ.

119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಗೆ 2023ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು 64 ಸ್ಥಾನಗಳನ್ನು ಗೆಲ್ಲುವ ಮೂಲಕ ಸರಳ ಬಹುಮತ ಸಾಧಿಸಿದೆ. ಕೆಸಿಆರ್‌ ನೇತೃತ್ವದ ಬಿಆರ್‌ಎಸ್‌ 39 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ.

2014ರ ಜೂನ್‌ 2ರಂದು ರಚನೆಯಾದ ತೆಲಂಗಾಣ ವಿಧಾನಸಭೆಯ ಮೊದಲ ಎರಡೂ ಅವಧಿಗೆ ಕೆಸಿಆರ್‌ ಮುಖ್ಯಮಂತ್ರಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.