ADVERTISEMENT

ಕೌಶಲ್ಯಾಭಿವೃದ್ಧಿ ವಿವಿಗೆ ₹100 ಕೋಟಿ ದೇಣಿಗೆ: ಅದಾನಿ ಹಣ ಬೇಡವೆಂದ ತೆಲಂಗಾಣ

ಪಿಟಿಐ
Published 25 ನವೆಂಬರ್ 2024, 11:30 IST
Last Updated 25 ನವೆಂಬರ್ 2024, 11:30 IST
ರೇವಂತ ರೆಡ್ಡಿ
ರೇವಂತ ರೆಡ್ಡಿ   

ಹೈದರಾಬಾದ್: ಯಂಗ್‌ ಇಂಡಿಯಾ ಕೌಶಲಾಭಿವೃದ್ಧಿ ವಿಶ್ವವಿದ್ಯಾಲಯಕ್ಕೆ ಅದಾನಿ ಸಮೂಹಸಂಸ್ಥೆಯ ಅಧ್ಯಕ್ಷ ಗೌತಮ್ ಅದಾನಿ ಘೋಷಿಸಿದ್ದ ₹100 ಕೋಟಿ ದೇಣಿಗೆಯನ್ನು ತೆಲಂಗಾಣ ಸರ್ಕಾರ ತಿರಸ್ಕರಿಸಿದೆ ಎಂದು ಮುಖ್ಯಮಂತ್ರಿ ಎ. ರೇವಂತ ರೆಡ್ಡಿ ಹೇಳಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದ ಅವರು, ‘ದೇಣಿಗೆ ಸ್ವೀಕರಿಸಿದರೆ ರಾಜ್ಯ ಸರ್ಕಾರ ಅಥವಾ ಮುಖ್ಯಮಂತ್ರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಎಂಬ ಅನಗತ್ಯ ಚರ್ಚೆ ಹುಟ್ಟಿಗೆ ಕಾರಣವಾಗುವ ಸಾಧ್ಯತೆ ಇದೆ. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

‘ಅದಾನಿಯನ್ನೂ ಒಳಗೊಂಡು ಯಾವುದೇ ಸಂಘ ಸಂಸ್ಥೆಗಳಿಂದ ತೆಲಂಗಾಣ ಸರ್ಕಾರವು ಯಾವುದೇ ದೇಣಿಗೆಯನ್ನು ಸ್ವೀಕರಿಸಿಲ್ಲ. ನಾನಾಗಲೀ ಅಥವಾ ನನ್ನ ಸಂಪುಟ ಸಹೋದ್ಯೋಗಿಗಳಾಗಲಿ ಸರ್ಕಾರದ ಹಾಗೂ ವೈಯಕ್ತಿಕ ಪ್ರತಿಷ್ಠೆಗೆ ಕಳಂಕ ತರಬಹುದಾದ ಯಾವುದರಲ್ಲೂ ಭಾಗಿಯಾಗುವುದಿಲ್ಲ. ಸದ್ಯ ದೇಣಿಗೆ ತಿರಸ್ಕರಿಸುವ ನಿರ್ಧಾರವನ್ನು ಅಧಿಕಾರಿಗಳು ಅದಾನಿಗೆ ಪತ್ರ ಬರೆದಿದ್ದಾರೆ’ ಎಂದಿದ್ದಾರೆ.

ADVERTISEMENT

‘ಅದಾನಿ ಕಂಪನಿ ವಿರುದ್ಧ ಸದ್ಯ ಕೇಳಿ ಬಂದಿರುವ ಆರೋಪ ಹಾಗೂ ವಿವಾದಗಳಿಂದಾಗಿ ತೆಲಂಗಾಣ ಸರ್ಕಾರವು ಅದಾನಿ ಕಂಪನಿ ನೀಡುವುದಾಗಿ ಘೋಷಿಸಿರುವ ₹100 ಕೋಟಿ ಸ್ವೀಕರಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.

ವಿಶ್ವವಿದ್ಯಾಲಯಕ್ಕೆ ದೇಣಿಗೆ ನೀಡುವ ಸಂಸ್ಥೆಗಳಿಗೆ ಆದಾಯ ತೆರಿಗೆ ವಿನಾಯಿತಿ ಲಭ್ಯವಾಗುವಂತೆ ಮಾಡುವ ರಾಜ್ಯ ಸರ್ಕಾರದ ಪ್ರಯತ್ನ ಇತ್ತೀಚೆಗೆ ಕೈಗೂಡಿದೆ. ಹೀಗಾಗಿ ಅದಾನಿ ಕಂಪನಿಯು ತಮ್ಮ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ವಿಶ್ವವಿದ್ಯಾಲಯಕ್ಕೆ ನೆರವಾಗಲು ಯತ್ನಿಸಿತ್ತು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.