ಹೈದರಾಬಾದ್: ಬಾಲಿವುಡ್ ನಟಿ, ಲೋಕಸಭಾ ಸದಸ್ಯೆ ಕಂಗನಾ ರನೌತ್ ನಿರ್ದೇಶಿಸಿ, ನಟಿಸಿರುವ 'ಎಮರ್ಜೆನ್ಸಿ' ಚಿತ್ರ ಸೆಪ್ಟೆಂಬರ್ 6ರಂದು ತೆರೆಕಾಣಲಿದೆ. ಆದರೆ, ತೆಲಂಗಾಣದಲ್ಲಿ ಚಿತ್ರ ಬಿಡುಗಡೆಗೆ ನಿಷೇಧ ಹೇರಲು ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದ ಸರ್ಕಾರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
‘ಎಮರ್ಜೆನ್ಸಿ’ ಚಿತ್ರದ ಬಿಡುಗಡೆಗೆ ನಿಷೇಧಿಸುವುದಾಗಿ ರೇವಂತ್ ರೆಡ್ಡಿ ಅವರು ಸಿಖ್ ಸಮುದಾಯದ ನಾಯಕರಿಗೆ ಭರವಸೆ ನೀಡಿದ್ದಾರೆ. ಈ ಕುರಿತು ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಸರ್ಕಾರದ ಕಾನೂನು ಸಲಹೆಗಾರ ಮೊಹಮ್ಮದ್ ಅಲಿ ಶಬ್ಬೀರ್ ಹೇಳಿದ್ದಾರೆ.
ಮಾಜಿ ಐಪಿಎಸ್ ಅಧಿಕಾರಿ ತೇಜ್‌ದೀಪ್ ಕೌರ್ ಮೆನನ್ ನೇತೃತ್ವದ ತೆಲಂಗಾಣ ಸಿಖ್ ಸೊಸೈಟಿಯ ನಿಯೋಗವು ಹೈದರಾಬಾದ್‌ನಲ್ಲಿ ಶಬ್ಬೀರ್ ಅವರನ್ನು ಭೇಟಿಯಾಗಿ ‘ಎಮರ್ಜೆನ್ಸಿ’ ಚಿತ್ರದ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದೆ.
‘ಎಮರ್ಜೆನ್ಸಿ’ ಚಿತ್ರದಲ್ಲಿ ಸಿಖ್ಖರನ್ನು ಭಯೋತ್ಪಾದಕರು ಮತ್ತು ದೇಶವಿರೋಧಿಗಳೆಂದು ಚಿತ್ರೀಕರಿಸಲಾಗಿದೆ. ಇದು ಆಕ್ಷೇಪಾರ್ಹ. ಇದರಿಂದಾಗಿ ಸಮುದಾಯದ ಘನತೆಗೆ ಹಾನಿಯುಂಟಾಗುತ್ತದೆ ಎಂದು ನಿಯೋಗದ ಸದಸ್ಯರು ದೂರಿದ್ದಾರೆ.
ತೆಲಂಗಾಣದಲ್ಲಿ ‘ಎಮರ್ಜೆನ್ಸಿ’ ಚಿತ್ರ ನಿಷೇಧಿಸುವ ಬಗ್ಗೆ ಸಿಎಂ ರೇವಂತ್ ರೆಡ್ಡಿ ಅವರಿಗೆ ಶಬ್ಬೀರ್ ಮನವಿ ಮಾಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ರೆಡ್ಡಿ, ಕಾನೂನು ಸಲಹೆ ಪಡೆದು ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.