ADVERTISEMENT

ತೆಲಂಗಾಣ: ಮಾಜಿ ಶಾಸಕನ ಬಂಧನ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 16:26 IST
Last Updated 13 ನವೆಂಬರ್ 2024, 16:26 IST
.
.   

ಹೈದರಾಬಾದ್‌: ವಿಕಾರಾಬಾದ್‌ನ ಕಲೆಕ್ಟರ್‌ ಪ್ರತೀಕ್‌ ಜೈನ್‌ ಮತ್ತು ಇತರ ಸರ್ಕಾರಿ ಅಧಿಕಾರಿಗಳ ಮೇಲೆ ಎರಡು ದಿನಗಳ ಹಿಂದೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಕೊಡಂಗಲ್‌ನ ಮಾಜಿ ಶಾಸಕ, ಬಿಆರ್‌ಎಸ್‌ನ ನರೇಂದರ್‌ ರೆಡ್ಡಿ ಅವರನ್ನು ತೆಲಂಗಾಣ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಮುಖ್ಯಮಂತ್ರಿ ಎ. ರೇವಂತ್‌ ರೆಡ್ಡಿ ಅವರ ಸ್ವಕ್ಷೇತ್ರ ಕೊಡಂಗಲ್‌ನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ನಗರದ ಕೆಬಿಆರ್‌ ಪಾರ್ಕ್‌ನಲ್ಲಿ ಮುಂಜಾನೆ ವಾಯುವಿಹಾರ ಮಾಡುತ್ತಿದ್ದ ಮಾಜಿ ಶಾಸಕರನ್ನು ಪೊಲೀಸರು ಬಂಧಿಸಿದರು.

ADVERTISEMENT

ಬಿಆರ್‌ಎಸ್‌ನ ಸ್ಥಳೀಯ ಮುಖಂಡನಾಗಿರುವ ಬಿ. ಸುರೇಶ್‌ ಪ್ರಕರಣದ ಪ್ರಮುಖ ಆರೋಪಿ. ಹಲ್ಲೆ ನಡೆಯುವ ಒಂದು ದಿನ ಮೊದಲು ಹಾಗೂ ಹಲ್ಲೆ ನಡೆದ ದಿನದಂದು ಈತ ಮಾಜಿ ಶಾಸಕರಿಗೆ ಸರಣಿ ಕರೆ ಮಾಡಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಹಲ್ಲೆಗೆ ಸಂಬಂಧಿಸಿದಂತೆ ಇದುವರೆಗೂ ಪೊಲೀಸರು ಲಾಗ್ಚೆರ್ಲಾದ 16 ನಿವಾಸಿಗಳನ್ನು ಬಂಧಿಸಿದ್ದು, ಮುಖ್ಯ ಆರೋಪಿ ಸುರೇಶ್‌ ಸೇರಿದಂತೆ ಮತ್ತಿತರ 40 ಜನರ ಬಂಧನಕ್ಕಾಗಿ ಶೋಧ ನಡೆಸಿದ್ದಾರೆ.

ಸರ್ಕಾರಿ ಅಧಿಕಾರಿಗಳ ತಂಡವು ಗ್ರಾಮಕ್ಕೆ ಭೇಟಿ ನೀಡಿದ್ದಾಗ ಕೆಲವರು ಖಾರದಪುಡಿ, ದೊಣ್ಣೆಗಳು ಹಾಗೂ ಕಲ್ಲುಗಳಿಂದ ದಾಳಿ ನಡೆಸಿದ್ದರು. ಇದು ಪೂರ್ವಯೋಜಿತ ಎಂದು ಪೊಲೀಸರು ಹೇಳಿದ್ದಾರೆ.

‘ತನ್ನ ಅಳಿಯನ ಔಷಧ ಕಂಪನಿ ಸ್ಥಾಪನೆಗಾಗಿ ರೇವಂತ್‌ ರೆಡ್ಡಿ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಕೊಂಡಗಲ್‌ನಲ್ಲಿ ಜಮೀನು ಸ್ವಾಧೀನಕ್ಕಾಗಿ ರೈತರ ಮೇಲೆ ಒತ್ತಡ ಸೃಷ್ಟಿಸುತ್ತಿದೆ’ ಎಂದು ಬಿಆರ್‌ಎಸ್‌ನ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ದೂರಿದ್ದಾರೆ.

‘ನಮ್ಮ ಪಕ್ಷದ ಕಾರ್ಯಕರ್ತ ಸುರೇಶ್‌ ಅವರ ಏಳು ಎಕರೆ ಜಮೀನು ಈ ಯೋಜನೆ ವ್ಯಾಪ್ತಿಗೆ ಬರಲಿದೆ. ಇದರ ವಿರುದ್ಧ ಧ್ವನಿ ಎತ್ತಬಾರದೇ? ಇದು ಬಡವರ ವಿರೋಧಿ ಸರ್ಕಾರ’ ಎಂದು ಗುಡುಗಿದ್ದಾರೆ.

ಅಧಿಕಾರಿಗಳ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿರುವ ತೆಲಂಗಾಣ ಐಎಎಸ್‌ ಅಸೋಸಿಯೇಷನ್‌, ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.