ಹೈದರಾಬಾದ್: ಟಿಆರ್‌ಎಸ್ ಕಾರ್ಯಕರ್ತರು ತಮ್ಮ ಕಾರಿನ ಮೇಲೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ ವೈಎಸ್‌ಆರ್‌ಟಿಪಿ ನಾಯಕಿ ವೈ.ಎಸ್. ಶರ್ಮಿಳಾ ಅವರನ್ನು ಹೈದರಾಬಾದ್ ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ.
ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ನಿವಾಸ ಬಳಿ ಕಾರಿನಲ್ಲಿ ಬಂದ ಶರ್ಮಿಳಾಗೆ ಪೊಲೀಸ್ ತಡೆಯೊಡ್ಡಿದ್ದಾರೆ.
ಶರ್ಮಿಳಾ ಅವರು ಕಾರಿನಲ್ಲಿ ಕುಳಿತಿರುವಾಗಲೇ ಕ್ರೇನ್ ಮೂಲಕ ಕಾರನ್ನು ಎಳೆದುಕೊಂಡು ಹೋಗುತ್ತಿರುವ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಸೋಮಾಜಿಗುಡದ ಯಶೋದಾ ಆಸ್ಪತ್ರೆ ಬಳಿ ಜನನಿಬಿಡ ರಸ್ತೆಯಲ್ಲಿ ಪ್ರಗತಿ ಭವನದತ್ತ ಕಾರನ್ನು ಚಲಾಯಿಸುತ್ತಿದ್ದಶರ್ಮಿಳಾ ಅವರನ್ನು ಪೊಲೀಸರು ತಡೆದಿದ್ದಾರೆ. ಇದರಿಂದಾಗಿ ಸೋಮಾಜಿಗುಡ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ.
‘ನನ್ನನ್ನು ಏಕೆ ಬಂಧಿಸುತ್ತಿದ್ದೀರಿ? ನಾನು ಬಲಿಪಶು, ಇಲ್ಲಿ ಆರೋಪಿಯಲ್ಲ. ಅನ್ಯಾಯ ಮತ್ತು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುತ್ತಿದ್ದಾಗ ತನ್ನನ್ನು ಏಕೆ ತಡೆಯುತ್ತಿದ್ದೀರಿ’ ಎಂದು ಪೊಲೀಸರವಿರುದ್ಧ ಶರ್ಮಿಳಾ ವಾಗ್ದಾಳಿ ನಡೆಸಿದ್ದಾರೆ.
ಆಂಧ್ರ ಪ್ರದೇಶದ ಹಾಲಿ ಸಿಎಂ ಜಗನ್ ಅವರ ತಂಗಿ, ಮಾಜಿ ಸಿಎಂ ರಾಜಶೇಖರ ರೆಡ್ಡಿ ಮಗಳುಶರ್ಮಿಳಾ ಅವರು ಕೆಸಿಆರ್ ನೇತೃತ್ವದ ತೆಲಂಗಾಣ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದು, ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಪಾದಯಾತ್ರೆ ಈವರೆಗೆ ಸುಮಾರು 3,500 ಕಿ.ಮೀ ಕ್ರಮಿಸಿದೆ.
ವಾರಂಗಲ್‌ನಲ್ಲಿ ಸೋಮವಾರ ವೈಎಸ್‌ಆರ್‌ಟಿಪಿ ಹಾಗೂ ಟಿಆರ್‌ಎಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು. ಇದೇ ವೇಳೆ ಮಾತನಾಡಿದ್ದ ಶರ್ಮಿಳಾ, ಸ್ಥಳೀಯ ಟಿಆರ್‌ಎಸ್ ಶಾಸಕ ಪೆದ್ದಿ ಸುದರ್ಶನ್ ರೆಡ್ಡಿ ಅವರನ್ನು ಟೀಕಿಸಿದ್ದರು.
ಶರ್ಮಿಳಾ ಮಾತುಗಳಿಂದ ಕೆರಳಿದ ಟಿಆರ್‌ಎಸ್ ಕಾರ್ಯಕರ್ತರು ಇಂದು ಅವರ ಕಾರಿನ ಮೇಲೆ ದಾಳಿ ನಡೆಸಿದ್ದಾರೆ.
ಹೆಚ್ಚಿನ ಮಾಹಿತಿ ಅಪ್‌ಡೇಟ್ ಮಾಡಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.