ADVERTISEMENT

ಉಲ್ಬಣಿಸಿದ ಸಾರಿಗೆ ಬಿಕ್ಕಟ್ಟಿನಿಂದ ತೆಲಂಗಾಣ ಜನರ ಪರದಾಟ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 9:12 IST
Last Updated 7 ನವೆಂಬರ್ 2019, 9:12 IST
 ಕೆ ಚಂದ್ರಶೇಖರ್‌ ರಾವ್‌
ಕೆ ಚಂದ್ರಶೇಖರ್‌ ರಾವ್‌   

ಹೈದರಾಬಾದ್:ಒಂದು ತಿಂಗಳು ಕಳೆದರೂ ತೆಲಂಗಾಣದ ಸಾಮಾನ್ಯ ಜನರಿಗೆ ಪ್ರಯಾಣವೆನ್ನುವುದು ಪ್ರಯಾಸವಾಗಿಯೇ ಉಳಿದಿದೆ. ತೆಲಂಗಾಣ ಸರ್ಕಾರ ಮತ್ತು ಅಲ್ಲಿನ ರಸ್ತೆ ಸಾರಿಗೆ ಸಂಸ್ಥೆಯ ನಡುವಿನ ಗುದ್ದಾಟ ಉಲ್ಬಣಿಸುತ್ತಲೇ ಸಾಗಿದೆ. ರಸ್ತೆ ಸಾರಿಗೆ ಸಂಸ್ಥೆಯ ಸುಮಾರು 49 ಸಾವಿರ ನೌಕರರು ತಮ್ಮ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ 34 ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ. ಇದಕ್ಕೆ ಸೊಪ್ಪು ಹಾಕದ ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಅವರು ಧರಣಿ ನಿರತ ನೌಕರರನ್ನು ವಜಾಗೊಳಿಸಿ ಆದೇಶ ಹೊರಡಿಸಿದ್ದು ನೌಕರರ ದೀರ್ಘಾವಧಿಯ ಬಿಗಿಪಟ್ಟಿಗೆ ಕಾರಣವಾಗಿದೆ.

ಇದೇ ವೇಳೆ ವಿರೋಧ ಪಕ್ಷಗಳಾದ ಕಾಂಗ್ರೆಸ್‌, ಜನಸೇನಾ, ಬಿಜೆಪಿ ಮತ್ತು ಎಡಪಕ್ಷಗಳು ಸಾರಿಗೆ ನೌಕರರ ಬೆನ್ನ ಹಿಂದೆ ನಿಂತಿರುವುದು ಬಿಕ್ಕಟ್ಟನ್ನು ಇನ್ನಷ್ಟು ಜಟಿಲಗೊಳಿಸಿದಂತಾಗಿದೆ. ಸಾರಿಗೆ ಸಂಸ್ಥೆಯ ಜಂಟಿ ಸಲಹಾ ಸಮಿತಿ ಸದಸ್ಯರು ತೆಲಂಗಾಣ ಬಿಜೆಪಿ ನಾಯಕರನ್ನು ಬೇಟಿ ಮಾಡಿ, ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರ ಮುಂದಾಗಲಿ ಎಂದು ಒತ್ತಾಯಿಸಿದ್ದಾರೆ.

ಇಷ್ಟೆಲ್ಲ ಬೆಳವಣಿಗೆಗಳ ನಡುವೆ ತನ್ನ ‍ಪಟ್ಟು ಸಡಿಲಿಸದ ತೆಲಂಗಾಣ ಸರ್ಕಾರ ಮುಖ್ಯಮಂತ್ರಿ ಕೆಸಿಆರ್‌ ನೇತೃತ್ವದಲ್ಲಿ ವಿಮರ್ಶಾ ಸಭೆ ನಡೆಸಿದೆ. ಆ ಮೂಲಕ ರಸ್ತೆ ಸಾರಿಗೆ ಸಂಸ್ಥೆಯು ಸರ್ಕಾರಿ ಒಡೆತನದ ‘ಆರ್‌ಟಿಸಿ ವರ್ಕರ್ಸ್ ಕ್ರೆಡಿಟ್ ಕೋಆಪರೇಟಿವ್‘ ಸಂಸ್ಥೆಯಿಂದ ತೆಗೆದುಕೊಂಡ ಸುಮಾರು 200 ಕೋಟಿ ರು. ಹಣವನ್ನು ಹಿಂತಿರುಗಿಸದೇ ಬಾಕಿ ಉಳಿಸಿಕೊಂಡಿದೆ ಎಂದು ಆರೋಪಿಸಿದೆ. ಸರ್ಕಾರದ ಬೆನ್ನಿಗೆ ನಿಂತಿರುವ ಬೃಹತ್‌ ಹೈದರಾಬಾದ್‌ ಮಹಾನಗರ ಪಾಲಿಕೆಯು ರಸ್ತೆ ಸಾರಿಗೆ ಸಂಸ್ಥೆಗೆ ಇನ್ನು ಮುಂದೆ ಯಾವುದೇ ಆರ್ಥಿಕ ನೆರವು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ADVERTISEMENT

ಸಿಎಂ ಕೆಸಿಆರ್‌ ಅವರು ನ.05 ನಡುರಾತ್ರಿ ಸಾರಿಗೆ ಸಂಸ್ಥೆಯ ನೌಕರರನ್ನು ತಮ್ಮ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶಿಸಿದ್ದರು. ಮುಖ್ಯಮಂತ್ರಿಗಳ ಮಾತಿಗೆ ಮಣಿಯದ ಸಾರಿಗೆ ನೌಕರರು ತಮ್ಮ ಪ್ರತಿಭಟನೆ, ಧರಣಿ ಮತ್ತು ಸತ್ಯಾಗ್ರಹಗಳನ್ನು ಮುಂದುವರೆಸಿದ್ದಾರೆ. ‘ಸರ್ಕಾರವು ಕಡ್ಡಾಯ ನಿವೃತ್ತಿ ಯೋಜನೆಯಡಿಯಲ್ಲಿ ಈಗಿರುವ ಸಾರಿಗೆ ನೌಕರರಿಂದ ಒತ್ತಾಯಪೂರ್ವಕವಾಗಿ ನಿವೃತ್ತಿ ತೆಗೆದುಕೊಳ್ಳಲಿದೆ. ಈ ಹುನ್ನಾರದ ಹಿಂದೆ ಖಾಸಗಿ ಕಂಪನಿಗಳ ಲಾಬಿಇದೆ,’ ಎಂಬುದು ಪ್ರತಿಭಟನಾನಿರತ ನೌಕರರ ವಾದವಾಗಿದೆ.

ಸರ್ಕಾರ ಮತ್ತು ಸಾರಿಗೆ ಸಂಸ್ಥೆ ನಡುವಿನ ಈ ಬಿಕ್ಕಟ್ಟಿನಿಂದ ಸಾಮಾನ್ಯರು ಪರದಾಡುವಂತಾಗಿದ್ದು ಜನರ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಅದರಲ್ಲೂ ಪ್ರತಿನಿತ್ಯ ಹಳ್ಳಿಗಳಿಂದ ಸಮೀಪದ ಶಾಲಾ–ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳ ಬವಣೆ ಹೇಳತೀರದಾಗಿದೆ. ಏನೇ ಆಗಲಿ, ಸರ್ಕಾರ ಮತ್ತು ಸಾರಿಗೆ ಸಂಸ್ಥೆ ತಮ್ಮ ನಡುವಿನ ಬಿಕ್ಕಟ್ಟನ್ನು ಆದಷ್ಟು ಬೇಗ ಬಗೆಹರಿಸಿಕೊಳ್ಳಬೇಕಿರುವುದು ಅನಿವಾರ್ಯ ಮತ್ತು ಅವಶ್ಯಕವೆಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.