ADVERTISEMENT

ತೆಲಂಗಾಣ: ನ. 6ರಿಂದ ಜಾತಿಗಣತಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 15:46 IST
Last Updated 30 ಅಕ್ಟೋಬರ್ 2024, 15:46 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಹೈದರಾಬಾದ್‌: ತೆಲಂಗಾಣದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವು ನವೆಂಬರ್ 6 ರಿಂದ ಸಮಗ್ರ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಸಮೀಕ್ಷೆಯನ್ನು ನಡೆಸಲು ಸಜ್ಜಾಗಿದೆ. ನವೆಂಬರ್ 30ರೊಳಗೆ ಸಮೀಕ್ಷೆಯನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯ ವೇಳೆ ನೀಡಿದ್ದ ಭರವಸೆಯನ್ನು ಈಡೇರಿಸಲು ಸರ್ಕಾರ ಮುಂದಾಗಿದೆ. ಚುನಾವಣೆಯ ಸಂದರ್ಭದಲ್ಲಿ, ಕಾಂಗ್ರೆಸ್‌ನ ಪ್ರಮುಖ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಜಾತಿ ಸಮೀಕ್ಷೆಯು ಎಕ್ಸ್-ರೇ ಆಗಿ ಕಾರ್ಯನಿರ್ವಹಿಸುತ್ತದೆ. ಹಿಂದುಳಿದ ಮತ್ತು ವಿಶೇಷವಾಗಿ ಹಿಂದುಳಿದ ವರ್ಗಗಳ (ಬಿಸಿ) ಕಲ್ಯಾಣ ಯೋಜನೆಗಳನ್ನು ರೂಪಿಸಲು ಸರ್ಕಾರಕ್ಕೆ ಇದರಿಂದ ಸಹಾಯವಾಗಲಿದೆ ಎಂದು ಒತ್ತಿಹೇಳಿದ್ದರು.

ADVERTISEMENT

80 ಸಾವಿರ ಗಣತಿದಾರರು ತೆಲಂಗಾಣದ ಪ್ರತಿ ಮನೆಗೆ ಭೇಟಿ ನೀಡಿ ರಾಜ್ಯದ ನಾಗರಿಕರ ಜಾತಿ ಮತ್ತು ಇತರ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳ ಬಗ್ಗೆ ದತ್ತಾಂಶ ಸಂಗ್ರಹಿಸಲಿದ್ದಾರೆ. 

ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಅವರು ಸಚಿವರಾದ ದುಡಿಲ್ಲ ಶ್ರೀಧರ್ ಬಾಬು ಮತ್ತು ಪೊನ್ನಂ ಪ್ರಭಾಕರ್ ಅವರೊಂದಿಗೆ ಬುಧವಾರ ಶಿಕ್ಷಕರ ಸಂಘಗಳ ಜತೆಗೆ ಸಭೆ ನಡೆಸಿ ಅಭಿಪ್ರಾಯಗಳನ್ನು ಸಂಗ್ರಹಿಸಿದರು.

‘ಜಾತಿಗಣತಿಯಲ್ಲಿ ತೆಲಂಗಾಣ ಮಾದರಿಯಾಗಲಿದೆ. ಅಲ್ಲದೆ ಐತಿಹಾಸಿಕ ಜಾತಿ ಗಣತಿ ಸಮೀಕ್ಷೆಯಲ್ಲಿ ಸರ್ಕಾರಿ ಶಿಕ್ಷಕರನ್ನು ತೊಡಗಿಸಿಕೊಳ್ಳಲು ಸರ್ಕಾರ ಉದ್ದೇಶಿಸಿದೆ’ ಎಂದು ವಿಕ್ರಮಾರ್ಕ ತಿಳಿಸಿದರು.  

‘ಕಾಮರೆಡ್ಡಿ ಬಿ.ಸಿ. ಘೋಷಣಾ ಸಭೆಯಲ್ಲಿ ನೀಡಿದ ಭರವಸೆಯಂತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಜಾತಿಗಣತಿಗೆ ಸಂಬಂಧಿಸಿದಂತೆ ರಾಜ್ಯ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ಈಗ ಆ ನಿರ್ಣಯವನ್ನು ಕಾರ್ಯರೂಪಕ್ಕೆ ತರುತ್ತಿದ್ದೇವೆ’ ಎಂದು ಭಟ್ಟಿ ವಿಕ್ರಮಾರ್ಕ ತಿಳಿಸಿದರು.

‘ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಇಡೀ ಸಚಿವ ಸಂಪುಟವು ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ತೊಡಗಿಸಿಕೊಳ್ಳಲು ನಿರ್ಧರಿಸಿದೆ. ಎಲ್ಲ ಜಿಲ್ಲೆಗಳಲ್ಲಿ ಗಣತಿದಾರರಿಗೆ ತರಬೇತಿ ಕಾರ್ಯಕ್ರಮಗಳು ಆರಂಭಗೊಂಡಿವೆ. ಶಿಕ್ಷಕರು ಸಾಮಾಜಿಕ ಪ್ರಜ್ಞೆಯುಳ್ಳವರಾಗಿದ್ದು, ತಮ್ಮ ಮಹತ್ವದ ಜವಾಬ್ದಾರಿಯನ್ನು ಅರಿತಿದ್ದಾರೆ. ಶಿಕ್ಷಕರು ಬೆಳಿಗ್ಗೆ ಸಮಯದಲ್ಲಿ ಸಮೀಕ್ಷೆ ನಡೆಸಬಹುದು. ಶಿಕ್ಷಕರು ರಜಾದಿನಗಳಲ್ಲಿ ಸಮೀಕ್ಷೆಯಲ್ಲಿ ಭಾಗವಹಿಸಿದರೆ ಪರಿಹಾರಾತ್ಮಕ ರಜೆ ಪಡೆಯಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.