ADVERTISEMENT

ಮಗಳನ್ನು ಪೋಷಕರ ಮಡಿಲು ಸೇರಿಸಿದ ‘ದರ್ಪಣ್‌’

ಪಿಟಿಐ
Published 17 ಡಿಸೆಂಬರ್ 2018, 13:04 IST
Last Updated 17 ಡಿಸೆಂಬರ್ 2018, 13:04 IST

ಹೈದರಾಬಾದ್: ತೆಲಂಗಾಣ ಪೊಲೀಸರು ಅಭಿವೃದ್ಧಿ ಪಡಿಸಿರುವ ಮುಖ ಚಹರೆ ಗುರುತಿಸುವಿಕೆ ತಂತ್ರಜ್ಞಾನದ ನೆರವಿನಿಂದಾಗಿ ನಾಪತ್ತೆಯಾಗಿದ್ದ ಬಾಲಕಿ ಪೋಷಕರ ಮಡಿಲು ಸೇರಿದ್ದಾಳೆ.

ಅಸ್ಸಾಂನ ಲಕ್ಕಿಂಪುರ್‌ನಗರದ ಅಂಜಲಿ ಟಿಗ್ಗಾ ಜೀವನೋಪಾಯ ಅರಸುತ್ತ ದೆಹಲಿಗೆ ಹೋಗಿದ್ದಳು. ಕಳೆದ ವರ್ಷ ಸೆಪ್ಟೆಂಬರ್‌ ತಿಂಗಳಿನಲ್ಲಿ ಅಸ್ಸಾಂಗೆ ಮರಳಿದ ಆಕೆ, ಸೋನಿತ್ಪುರ್‌ ಜಿಲ್ಲೆಯ ಸಮೀಪ ಕೆಲಸಕ್ಕೆ ಸೇರಿದ್ದಳು. ಆದರೆ ಈ ಕುರಿತು ಪೋಷಕರಿಗೆ ಮಾಹಿತಿ ಇರಲಿಲ್ಲ.

ಬಾಲಕಿಯನ್ನು ಗಮನಿಸಿದ ರೈಲ್ವೆ ಪೊಲೀಸರು ಮಕ್ಕಳ ಕಲ್ಯಾಣ ಸುಪರ್ದಿಗೆ ವಹಿಸಿದರು. ತೇಜ್‌ಪುರದ ಪುನರ್ವಸತಿ ಕೇಂದ್ರದಲ್ಲಿ ಈಕೆಯನ್ನು ಇರಿಸಲಾಗಿತ್ತು.

ADVERTISEMENT

ಕಳೆದ ವರ್ಷ ಆಗಸ್ಟ್‌ ತಿಂಗಳಲ್ಲಿ ಈಕೆಯ ಪೋಷಕರು ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಮಕ್ಕಳು ಮತ್ತು ಪೋಷಕರ ಮುಖ ಚಹರೆಯನ್ನು ಗುರುತಿಸುವ ‘ದರ್ಪಣ್‌’ ತಂತ್ರಜ್ಞಾನದ ಮೂಲಕ ಈ ಬಾಲಕಿಯ ಪೋಷಕರನ್ನು ಪತ್ತೆ ಹಚ್ಚಲಾಗಿದೆ. ಭಾನುವಾರ ಬಾಲಕಿಯನ್ನು ಪೋಷಕರ ಸುಪರ್ದಿಗೆ ವಹಿಸಲಾಗಿದೆ.

ಪುನರ್ವಸತಿ ಕೇಂದ್ರದಲ್ಲಿರುವ ಹಲವು ಮಕ್ಕಳ ಮುಖ ಚಹರೆ ಪೋಷಕರೊಂದಿಗೆ ಹೊಂದಿಕೆಯಾಗಿದ್ದು, ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಹಿಳಾ ಸುರಕ್ಷಾ ಘಟಕದ ಸ್ವಾತಿ ಲಾಕ್ರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.