ADVERTISEMENT

ತೆಲಂಗಾಣ: ಶಂಷಾಬಾದ್‌ನಲ್ಲಿ ನವಗ್ರಹ ಮೂರ್ತಿಗಳ ಧ್ವಂಸ

ಮಾನಸಿಕ ಅಸ್ವಸ್ಥನಿಂದ ಕೃತ್ಯ ಶಂಕೆ

ಪಿಟಿಐ
Published 5 ನವೆಂಬರ್ 2024, 16:00 IST
Last Updated 5 ನವೆಂಬರ್ 2024, 16:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್‌: ಹನುಮಾನ್‌ ದೇವಾಲಯದ ನವಗ್ರಹ ಮೂರ್ತಿಗಳನ್ನು ಧ್ವಂಸಗೊಳಿಸಿರುವ ಘಟನೆ ರಂಗಾರೆಡ್ಡಿ ಜಿಲ್ಲೆಯ ಶಂಷಾಬಾದ್‌ನಲ್ಲಿ ನಡೆದಿದೆ.

ಸೋಮವಾರ ತಡರಾತ್ರಿ ಈ ಘಟನೆ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಪ್ರಕರಣ ಸಂಬಂಧ ಒಬ್ಬನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ADVERTISEMENT

ಮೂರ್ತಿಗಳನ್ನು ಧ್ವಂಸಗೊಳಿಸಿರುವ ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ದೇವಾಲಯದ ಬಳಿ ಜಮಾಯಿಸಿ, ಪ್ರತಿಭಟನೆ ನಡೆಸಿದರು. 

‘ದೇವಾಲಯದಲ್ಲಿನ ಮೂರ್ತಿಗಳನ್ನು ಭಗ್ನಗೊಳಿಸಿರುವ ವಿಚಾರವನ್ನು ಭಕ್ತರೊಬ್ಬರು ಮಂಗಳವಾರ ಮುಂಜಾನೆ ತಿಳಿಸಿದರು. ಬಳಿಕ ಸ್ಥಳಕ್ಕೆ ತೆರಳಿ ನೋಡಿದಾಗ ಐದು ಮೂರ್ತಿಗಳನ್ನು ಧ್ವಂಸಗೊಳಿಸಲಾಗಿತ್ತು’ ಎಂದು ದೇವಾಲಯದ ಅರ್ಚಕರು ಪ್ರತಿಕ್ರಿಯಿಸಿದ್ದಾರೆ. 

ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ದಾಳಿ ನಡೆಸಿರುವ ಶಂಕೆ ಮೇಲೆ 50 ವರ್ಷದ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಪರಿಸ್ಥಿತಿ ಶಾಂತ ರೀತಿಯಲ್ಲಿದೆ ಎಂದು ಶಂಷಾಬಾದ್‌ ಡಿಸಿಪಿ ಬಿ.ರಾಜೇಶ್‌ ತಿಳಿಸಿದ್ದಾರೆ.

ಬಿಜೆಪಿ ಕಿಡಿ: ಮೂರ್ತಿಗಳು ಧ್ವಂಸಗೊಂಡಿರುವ ವಿಡಿಯೊವನ್ನು ತೆಲಂಗಾಣ ಬಿಜೆಪಿಯು ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದು, ತೆಲಂಗಾಣದ ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕಿಡಿಕಾರಿದೆ.

‘ಮತ್ತದೇ ದುರಂತದ ದಿನ. ಕಾಂಗ್ರೆಸ್‌ ಆಡಳಿತದಲ್ಲಿ ಮತ್ತೊಂದು ಪವಿತ್ರ ಹಿಂದೂ ದೇವಾಲಯವನ್ನು ಅಪವಿತ್ರಗೊಳಿಸಲಾಗಿದೆ. ತುಷ್ಟೀಕರಣದ ರಾಜಕೀಯಕ್ಕೆ ಜೋತು ಬಿದ್ದಿರುವ ಕಾಂಗ್ರೆಸ್‌, ದೇವಾಲಯಗಳ ಮೇಲೆ ದಾಳಿ ಮಾಡಿದವರ ಬಗ್ಗೆ ಕುರುಡಾಗಿ ವರ್ತಿಸುತ್ತಿದೆ. ಅವರನ್ನು ಬಂಧಿಸಿ ಶಿಕ್ಷಿಸದೆ, ಇಂತಹ ಕೃತ್ಯಗಳನ್ನು ಮುಂದುವರಿಸುವಂತೆ ಹುರಿದುಂಬಿಸುತ್ತಿದೆ’ ಎಂದು ಆಪಾದಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.