ಸೂರತ್: ನಿಯಂತ್ರಣವಿಲ್ಲದೆ ವಾಹನ ಚಲಾಯಿಸಿದ್ದನ್ನು ಪ್ರಶ್ನಿಸಿದ 56 ವರ್ಷದ ವ್ಯಕ್ತಿಯ ಮೇಲೆ ಟೆಂಪೊ ಹರಿಸಿ, 15 ಅಡಿಗಳಷ್ಟು ದೂರದವರೆಗೆ ಆತನನ್ನು ಎಳೆದೊಯ್ದ ಚಾಲಕನನ್ನು ಸೂರತ್ ನಗರ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಮಯೂರ್ ಮೇರ್ (39) ಬಂಧಿತ ಚಾಲಕ. ಸಿ.ಸಿ.ಟಿ.ವಿ ದೃಶ್ಯಾವಳಿಯನ್ನು ಪರಿಶೀಲಿಸಿದ ನಂತರ ಪೊಲೀಸರು ಆತನನ್ನು ವಶಕ್ಕೆ ಪಡೆದರು. ಜಿತೇಂದ್ರ ಕತಾರಿಯಾ ಪ್ರಕರಣದಲ್ಲಿ ಮೃತಪಟ್ಟ ವ್ಯಕ್ತಿ.
‘ಶನಿವಾರ ಮಧ್ಯಾಹ್ನ ರತ್ನಮಾಲಾ ಕೂಡುದಾರಿಯ ಬಳಿ ಸಿಗ್ನಲ್‌ನಲ್ಲಿ ಜಿತೇಂದ್ರ ಹಾಗೂ ಅವರ ಮಗ ಮೋಟರ್ ಸೈಕಲ್‌ನಲ್ಲಿ ಸಾಗುತ್ತಿದ್ದರು. ಸಿಗ್ನಲ್ ಬಳಿ ನಿಂತಿದ್ದಾಗ ಟೆಂಪೊವೊಂದು ಗುದ್ದಿತು. ತಂದೆ ಮತ್ತು ಮಗ ಸರಿಯಾಗಿ ವಾಹನ ಚಲಾಯಿಸುವಂತೆ ಟೆಂಪೊ ಚಾಲಕ ಮಯೂರ್ ಅವರಿಗೆ ಹೇಳಿದರು. ಅವರ ಜೊತೆ ಮಯೂರ್ ವಾಗ್ವಾದಕ್ಕಿಳಿದ. ಟೆಂಪೊ ಬಳಿಗೆ ಜಿತೇಂದ್ರ ಅವರು ಧಾವಿಸಿದಾಗ ಅವರ ಮೇಲೆ ಟೆಂಪೊ ಹರಿಸಿದ ಮಯೂರ್, ವಾಹನಕ್ಕೆ ಸಿಲುಕಿದ ಅವರನ್ನು 15 ಅಡಿಯಷ್ಟು ದೂರಕ್ಕೆ ಎಳೆದೊಯ್ದ. ಅಲ್ಲಿಂದ ಟೆಂಪೊ ನಿಲ್ಲಿಸಿ ಪರಾರಿಯಾದ’ ಎಂದು ಸಿ.ಸಿ.ಟಿ.ವಿ ದೃಶ್ಯಾವಳಿ ಆಧರಿಸಿ ಪೊಲೀಸರು ತಿಳಿಸಿದರು.
ಜಿತೇಂದ್ರ ಅವರ ಮಗ ವಾಹನ ನಿಲ್ಲಿಸುವಂತೆ ಅಂಗಲಾಚಿದರೂ ಕೇಳದ ಮಯೂರ್ ಕೃತ್ಯ ಎಸಗಿದ್ದು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆತನನ್ನು ಬಂಧಿಸಿದರು.
ಜಿತೇಂದ್ರ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.