ನವದೆಹಲಿ: ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತ ಸಂಘಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಶುಕ್ರವಾರ ‘ಭಾರತ್ ಬಂದ್‘ಗೆ ಕರೆ ನೀಡಿದೆ. ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಮತ್ತು ಬೆಳೆಗಳಿಗೆ ನೀಡಲಾಗುತ್ತಿರುವ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಮಾನ್ಯತೆ ನೀಡಬೇಕೆಂದು ರೈತರು ಪಟ್ಟು ಹಿಡಿದಿದ್ದಾರೆ. ಭಾರತ್ ಬಂದ್ ಕುರಿತಂತೆ ನೀವು ತಿಳಿಯಬೇಕಾದ 10 ಮಾಹಿತಿ ಇಲ್ಲಿವೆ.
1. ರಾಜಧಾನಿ ದೆಹಲಿಯ ಸಿಂಘು, ಗಾಜಿಪುರ ಮತ್ತು ಟಿಕ್ರಿ ಗಡಿಗಳು ಸೇರಿದಂತೆ ದೇಶದಾದ್ಯಂತ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಎಲ್ಲ ರಸ್ತೆ ಮತ್ತು ರೈಲು ಸಾರಿಗೆ, ಮಾರುಕಟ್ಟೆಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳನ್ನು ಬಂದ್ ಮಾಡಲಾಗುವುದು ಎಂದು ಸಂಯುಕ್ತಾ ಕಿಸಾನ್ ಮೋರ್ಚಾ ಹೇಳಿಕೆಯಲ್ಲಿ ತಿಳಿಸಿದೆ.
2. ಸಂಘಟಿತ ಮತ್ತು ಅಸಂಘಟಿತ ವಲಯಗಳ ಕಾರ್ಮಿಕ ಸಂಘಗಳು, ಸಾರಿಗೆ ಮತ್ತು ಇತರ ಸಂಘಗಳು 'ಭಾರತ್ ಬಂದ್' ಕರೆಗೆ ಬೆಂಬಲವನ್ನು ನೀಡಿವೆ ಎಂದು ಹಿರಿಯ ರೈತ ಮುಖಂಡ ಬಲ್ಬೀರ್ ಸಿಂಗ್ ರಾಜೇವಾಲ್ ಹೇಳಿದ್ದಾರೆ. ಆದರೆ, 'ಭಾರತ್ ಬಂದ್'ನಲ್ಲಿ ಭಾಗವಹಿಸದ ಕಾರಣ ಮಾರುಕಟ್ಟೆಗಳು ತೆರೆದಿರುತ್ತವೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಹೇಳಿದೆ.
3. ಪ್ರತಿಭಟನಾ ನಿರತ ರೈತರು ದೇಶದ ವಿವಿಧ ಸ್ಥಳಗಳಲ್ಲಿ ರೈಲು ಹಳಿಗಳನ್ನು ನಿರ್ಬಂಧಿಸುತ್ತಾರೆ. ಎಲ್ಲ ಸಣ್ಣ ಮತ್ತು ದೊಡ್ಡ ರಸ್ತೆಗಳು, ರೈಲುಗಳನ್ನು ತಡೆಯಲಾಗುತ್ತದೆ ಎಂದು ರಾಜೇವಾಲ್ ಹೇಳಿದ್ದಾರೆ.
4. ಪ್ರತಿಭಟನಾ ನಿರತ ರೈತರು ತರಕಾರಿಗಳು ಮತ್ತು ಹಾಲಿನ ಸರಬರಾಜನ್ನು ಸಹ ತಡೆಯುತ್ತಾರೆ ಎಂದು ಎಸ್‌ಕೆಎಂ ಮುಖಂಡ ದರ್ಶನ್ ಪಾಲ್ ಹೇಳಿದರು.
5. ಭಾರತ್ ಬಂದ್ ಅಡಿಯಲ್ಲಿ ಎಲ್ಲ ಅಂಗಡಿ–ಮುಂಗಟ್ಟುಗಳು, ಮಾಲ್‌ಗಳು, ಮಾರುಕಟ್ಟೆಗಳು ಮತ್ತು ಸಂಸ್ಥೆಗಳು ಮುಚ್ಚಲ್ಪಡುತ್ತವೆ ಎಂದು ಎಸ್‌ಕೆಎಂ ಹೇಳಿದೆ. ಬಂದ್ ಅನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಾದ್ಯಂತ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವುದಾಗಿ ಒಡಿಶಾ ಸರ್ಕಾರ ಗುರುವಾರ ಘೋಷಿಸಿದೆ.
6. ಆಂಬ್ಯುಲೆನ್ಸ್ ಮತ್ತು ವೈದ್ಯಕೀಯ ತುರ್ತು ಸೇವೆಗಳು ಇರಲಿವೆ ಎಂದು ಸಂಘಟನೆ ತಿಳಿಸಿದೆ.
7. ಪ್ರಮುಖವಾಗಿ ಹರಿಯಾಣ ಮತ್ತು ಪಂಜಾಬ್‌ನಲ್ಲಿ ಭಾರತ್ ಬಂದ್‌ನಪರಿಣಾಮ ಇರಲಿದೆ ಎಂದು ಮತ್ತೊಬ್ಬ ರೈತ ಮುಖಂಡರು ಹೇಳಿದ್ದಾರೆ.
8. ಚುನಾವಣೆ ಎದುರಿಸುತ್ತಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ ಮತ್ತು ಪುದುಚೇರಿಗಳಲ್ಲಿ ಬಂದ್ ಇರುವುದಿಲ್ಲ ಎಂದು ಎಸ್‌ಕೆಎಂತಿಳಿಸಿದೆ.
9. ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದರ ಹೊರತಾಗಿ, ಪ್ರತಿಭಟನಾಕಾರರ ಒಕ್ಕೂಟದ ರೈತರ ವಿರುದ್ಧದ ಎಲ್ಲ ಪೊಲೀಸ್ ಪ್ರಕರಣಗಳನ್ನು ರದ್ದುಪಡಿಸುವುದು, ವಿದ್ಯುತ್ ಬಿಲ್ ಮತ್ತು ಮಾಲಿನ್ಯ ಮಸೂದೆ ಹಿಂತೆಗೆದುಕೊಳ್ಳುವುದು. ಡೀಸೆಲ್, ಪೆಟ್ರೋಲ್ ಮತ್ತು ಅನಿಲದ ಬೆಲೆಗಳನ್ನು ಕಡಿಮೆ ಮಾಡುವುದು ರೈತರ ಬೇಡಿಕೆಗಳಲ್ಲಿ ಸೇರಿವೆ.
10. 'ಬಂದ್' ಸಮಯದಲ್ಲಿ ರೈತರು ಶಾಂತಿಯುತ ಪ್ರತಿಭಟನೆ ನಡೆಸಬೇಕು. ಯಾವುದೇ ರೀತಿಯ ನ್ಯಾಯಸಮ್ಮತವಲ್ಲದ ಚರ್ಚೆ ಮತ್ತು ಸಂಘರ್ಷಗಳಲ್ಲಿ ಭಾಗಿಯಾಗಬಾರದು ಎಂದು ಸಂಘಟನೆ ಮನವಿ ಮಾಡಿದೆ.
ಇಲ್ಲಿಯವರೆಗೆ, ಪ್ರತಿಭಟನಾ ನಿರತ ರೈತ ಸಂಘಗಳು ಮತ್ತು ಸರ್ಕಾರದ ನಡುವೆ 11 ಸುತ್ತಿನ ಮಾತುಕತೆಗಳು ನಡೆದಿವೆ. ಆದರೆ, ಎರಡೂ ಕಡೆಯವರು ತಮ್ಮ ನಿಲುವಿಗೆ ಅಂಟಿಕೊಂಡಿದ್ದರಿಂದ ಯಾವುದೇ ನಿರ್ಧಾರಕ್ಕೆ ಬರಲಾಗದೆ ಕಗ್ಗಂಟು ಮುಂದುವರಿದಿದೆ.
ಜನವರಿಯಲ್ಲಿ, ಕೃಷಿ ಕಾನೂನುಗಳನ್ನು 12-18 ತಿಂಗಳುಗಳವರೆಗೆ ಅಮಾನತುಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿತ್ತು, ಆದರೆ, ಈ ಪ್ರಸ್ತಾವವನ್ನೂ ರೈತ ಸಂಘಗಳು ತಿರಸ್ಕರಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.