ಲಖನೌ: ಕಳ್ಳ ಎಂದು ಭಾವಿಸಿ, ಗುಂಪೊಂದು ಮುಸ್ಲಿಂ ಯುವಕನನ್ನು ಹತ್ಯೆ ಮಾಡಿದೆ ಎನ್ನಲಾಗಿದೆ. ಇದರಿಂದ, ಕೋಮು ವಿಚಾರವಾಗಿ ಸೂಕ್ಷ್ಮವಾಗಿರುವ ಉತ್ತರ ಪ್ರದೇಶದ ಅಲಿಗಢ ಪಟ್ಟಣದಲ್ಲಿ ಮಂಗಳವಾರ ರಾತ್ರಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮೃತನನ್ನು 35 ವರ್ಷದ ಫರೀದ್ ಅಲಿಯಾಸ್ ಔರಂಗಜೇಬ್ ಎಂದು ಗುರುತಿಸಲಾಗಿದೆ.
ಯುವಕನ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಉದ್ರಿಕ್ತರ ಗುಂಪು, ಭಾರಿ ಪ್ರಮಾಣದಲ್ಲಿ ಕಲ್ಲು ತೂರಾಟ ನಡೆಸಿತು. ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಿ, ರಸ್ತೆ ಮೇಲೆ ಕುಳಿತು ಪ್ರತಿಭಟಿಸಿತು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದ್ದು ಎನ್ನಲಾದ ವಿಡಿಯೊ ಪರಿಶೀಲಿಸಿದ ನಂತರ, ವ್ಯಾಪಾರಿಯೊಬ್ಬರ ಕುಟುಂಬದ ಸದಸ್ಯರು ಸೇರಿದಂತೆ 6 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ಹೇಳಿವೆ.
‘ಮಂಗಳವಾರ ರಾತ್ರಿ ಪಟ್ಟಣದ ಮಾಮು–ಭಾಂಜಾ ಪ್ರದೇಶದಲ್ಲಿರುವ ವ್ಯಾಪಾರಿಯ ಮನೆ ಪ್ರವೇಶಿಸಲು ಯತ್ನಿಸಿದ ವೇಳೆ ಕೆಲವರು ಫರೀದ್‌ನನ್ನು ಹಿಡಿದಿದ್ದಾರೆ. ಆತನನ್ನು ಕಳ್ಳ ಎಂಬುದಾಗಿ ಭಾವಿಸಿದ ಜನರು ಬಡಿಗೆಗಳಿಂದ ಹೊಡೆದಿದ್ದಾರೆ ಎನ್ನಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಜನರ ಗುಂಪು ಫರೀದ್‌ಗೆ ಒದೆಯುತ್ತಿರುವ ಹಾಗೂ ಗುದ್ದುತ್ತಿರುವ ದೃಶ್ಯಗಳು ವಿಡಿಯೊದಲ್ಲಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಫರೀದ್‌ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಆತ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ.
ಈ ಸುದ್ದಿ ಹಬ್ಬುತ್ತಿದ್ದಂತೆಯೇ, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ (ಎಎಂಯು) ವಿದ್ಯಾರ್ಥಿಗಳ ನಾಯಕರು ಆಸ್ಪತ್ರೆಗೆ ಧಾವಿಸಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಜನರು ಆಸ್ಪತ್ರೆ ಮುಂದೆ ಸೇರಿ, ಘಟನೆ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ.
ವ್ಯಾಪಾರಿಗಳಿಂದ ಪ್ರತಿಭಟನೆ
ಘಟನೆಗೆ ಸಂಬಂಧಿಸಿ ವ್ಯಾಪಾರಿಯೊಬ್ಬರ ಕುಟುಂಬದ ಸದಸ್ಯರು ಸೇರಿದಂತೆ 6 ಜನರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರ ಕ್ರಮವನ್ನು ಖಂಡಿಸಿ ಪಟ್ಟಣದ ವರ್ತಕರು ಬಿಜೆಪಿ ನಾಯಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ತಮ್ಮ ಅಂಗಡಿಗಳನ್ನು ಮುಚ್ಚಿದ ವ್ಯಾಪಾರಿಗಳು ಬಂಧಿತರನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿದರು. ‘ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿದ್ದು ತನಿಖೆ ನಡೆಯುತ್ತಿದೆ. ಪಟ್ಟಣದ ಸೂಕ್ಷ್ಮ ಪ್ರದೇಶಗಳಲ್ಲಿ ವ್ಯಾಪಕ ಬಂದೋಬಸ್ತ್ ಹಾಕಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.