ಚೆನ್ನೈ: ಸಮ್ಮತಿಯ ಲೈಂಗಿಕ ಸಂಪರ್ಕ ಕಾರಣದಿಂದಾಗಿ ಗರ್ಭಿಣಿಯಾದ ಬಾಲಕಿಯು ಗರ್ಭಪಾತ ಮಾಡಿಸಿಕೊಳ್ಳಲು ಬಂದಾಗ ವೈದ್ಯರು ಆಕೆಯ ಹೆಸರನ್ನು ಬಹಿರಂಗಪಡಿಸುವ ಅಗತ್ಯ ಇಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ಪೋಕ್ಸೊ ಪ್ರಕರಣಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಎನ್.ಆನಂದ ವೆಂಕಟೇಶ್ ಹಾಗೂ ಸುಂದರಮೋಹನ್ ಅವರಿದ್ದ ನ್ಯಾಯಪೀಠ ಇತ್ತೀಚೆಗೆ ಈ ಕುರಿತು ಆದೇಶ ಹೊರಡಿಸಿದೆ.
ಇಂತಹ ಪ್ರಕರಣಗಳಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನಗಳನ್ನು ನ್ಯಾಯಪೀಠವು ಆದೇಶದಲ್ಲಿ ಉಲ್ಲೇಖಿಸಿದೆ.
‘ಸಮ್ಮತಿಯ ಲೈಂಗಿಕ ಸಂಪರ್ಕದಿಂದಾಗಿ ಗರ್ಭಿಣಿಯಾದ ಬಾಲಕಿಯೊಬ್ಬಳು ಗರ್ಭಪಾತ ಮಾಡಿಸಿಕೊಳ್ಳುವುದಕ್ಕಾಗಿ ನೋಂದಾಯಿತ ವೈದ್ಯಕೀಯ ವೃತ್ತಿನಿರತರ (ಆರ್‌ಎಂಪಿ) ಬಳಿ ತೆರಳಿದ ಸಂದರ್ಭದಲ್ಲಿ, ಪೋಕ್ಸೊ ಕಾಯ್ದೆ ಸೆಕ್ಷನ್ 19(1) ಅಡಿ ವೈದ್ಯರು, ಈ ವಿಷಯ ಕುರಿತು ಸಂಬಂಧಪಟ್ಟ ಪ್ರಾಧಿಕಾರಕ್ಕೆ ತಿಳಿಸಬೇಕು’ ಎಂಬ ಸುಪ್ರೀಂಕೋರ್ಟ್ ಆದೇಶದಲ್ಲಿನ ಈ ಅಂಶವನ್ನು ನ್ಯಾಯಪೀಠ ಉಲ್ಲೇಖಿಸಿದೆ.
‘ಇಂತಹ ಸಂದರ್ಭಗಳಲ್ಲಿ ಬಾಲಕಿಯರು ಮತ್ತು ಅವರ ಪೋಷಕರ ಮುಂದೆ ಎರಡೇ ಆಯ್ಕೆಗಳಿರುತ್ತವೆ. ಒಂದೋ ಅವರು, ಆರ್‌ಎಂಪಿ ಬಳಿ ತೆರಳುವುದು ಹಾಗೂ ಪೋಕ್ಸೊ ಕಾಯ್ದೆಯಡಿ ನಡೆಯುವ ವಿಚಾರಣೆಯನ್ನು ಎದುರಿಸಬೇಕು. ಇಲ್ಲವೇ, ಅರ್ಹತೆ ಹೊಂದಿರದ ವೈದ್ಯನ ಬಳಿ ಹೋಗಿ ಗರ್ಭಪಾತ ಮಾಡಿಕೊಳ್ಳಬೇಕು’ ಎಂದೂ ಸುಪ್ರೀಂಕೋರ್ಟ್ ಹೇಳಿತ್ತು.
‘ಪೋಕ್ಸೊ ಕಾಯ್ದೆ ಸೆಕ್ಷನ್ 19(1) ಅಡಿ ಬಾಲಕಿಯ ಹೆಸರನ್ನು ಬಹಿರಂಗಪಡಿಸಬೇಕು ಎಂಬ ಒತ್ತಾಯವಿದ್ದಲ್ಲಿ, ಗರ್ಭಪಾತಕ್ಕಾಗಿ ಬಾಲಕಿಯರು ಆರ್‌ಎಂಪಿ ಬಳಿ ಹೋಗುವ ಸಾಧ್ಯತೆ ಕಡಿಮೆ ಇರುತ್ತದೆ’ ಎಂದೂ ಹೇಳಿತ್ತು.
‘ಈ ಎಲ್ಲ ಅಂಶಗಳಿಂದ ಸ್ಪಷ್ಟವಾಗುವ ವಿಷಯವೆಂದರೆ, ಸಮ್ಮತಿಯ ಲೈಂಗಿಕ ಸಂಪರ್ಕದಿಂದಾಗಿ ಗರ್ಭಿಣಿಯಾಗುವ ಬಾಲಕಿಯು ಗರ್ಭಪಾತ ಮಾಡಿಸಿಕೊಳ್ಳಲು ಆರ್‌ಎಂಪಿ ಬಳಿ ತೆಳಿದ ಸಂದರ್ಭದಲ್ಲಿ, ಆಕೆಯ ಹೆಸರನ್ನು ಬಹಿರಂಗಪಡಿಸುವಂತೆ ಒತ್ತಾಯಪಡಿಸುವ ಅಗತ್ಯ ಇಲ್ಲ’ ಎಂದು ಮದ್ರಾಸ್ ಹೈಕೋರ್ಟ್‌ನ ನ್ಯಾಯಪೀಠ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.