ಆನಂದ್(ಗುಜರಾತ್): ಕಾಂಗ್ರೆಸ್ ಪಕ್ಷವು ಪಾಕಿಸ್ತಾನದ ಅನುಯಾಯಿ ಎಂದು ಕರೆದಿರುವ ಪ್ರಧಾನಿ ನರೇಂದ್ರ ಮೋದಿ, ನೆರೆಯ ದೇಶವು ಭಾರತದ ಅತ್ಯಂತ ಹಳೆಯ ಪಕ್ಷದ(ಕಾಂಗ್ರೆಸ್) ಯುವರಾಜನನ್ನು(ರಾಹುಲ್ ಗಾಂಧಿ) ಪ್ರಧಾನಿ ಮಾಡಲು ಇಚ್ಛಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರದಲ್ಲಿ ಸಚಿವರಾಗಿದ್ದ ಚೌಧರಿ ಫವಾಡ್ ಹುಸೇನ್, ರಾಹುಲ್ ಗಾಂಧಿ ಇರುವ ವಿಡಿಯೊವನ್ನು ನಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡು ಹಾಡಿ ಹೊಗಳಿದ್ದಾರೆ ಎಂಬ ವರದಿಗಳ ನಡುವೆ ಮೋದಿ ಈ ಹೇಳಿಕೆ ನೀಡಿದ್ದಾರೆ.
‘ಇಲ್ಲಿ ಕಾಂಗ್ರೆಸ್ ಸಾಯುತ್ತಿರುವುದಕ್ಕೆ ಅಲ್ಲಿ ಪಾಕಿಸ್ತಾನ ಅಳುತ್ತಿದೆ. ಪಾಕಿಸ್ತಾನದ ನಾಯಕರು ಕಾಂಗ್ರೆಸ್‌ಗಾಗಿ ಪ್ರಾರ್ಥಿಸುತ್ತಿದ್ದಾರೆ. ಪಾಕಿಸ್ತಾನವು ಯುವರಾಜನನ್ನು(ರಾಹುಲ್ ಗಾಂಧಿಯನ್ನು ಉದ್ದೇಶಿಸಿ) ಮುಂದಿನ ಪ್ರಧಾನಿಯಾಗಿ ನೋಡಲು ಇಚ್ಛಿಸುತ್ತಿದೆ. ಇದು ಅಚ್ಚರಿಯೇನಲ್ಲ. ಈಗಾಗಲೇ ನಾವು ಕಾಂಗ್ರೆಸ್, ಪಾಕಿಸ್ತಾನದ ಅನುಯಾಯಿಯಾಗಿರುವುದನ್ನು ಕಂಡಿದ್ದೇವೆ. ಪಾಕಿಸ್ತಾನ ಮತ್ತು ಕಾಂಗ್ರೆಸ್ ನಡುವಿನ ಒಡಂಬಡಿಕೆ ಬಯಲಾಗಿದೆ. ಶತ್ರುಗಳು ದೇಶದಲ್ಲಿ ದುರ್ಬಲ ಸರ್ಕಾರ ಬೇಕೆಂದು ಬಯಸುತ್ತಿದ್ದಾರೆ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ’ಎಂದು ಮೋದಿ ಹೇಳಿದ್ದಾರೆ.
ಕೇಂದ್ರ ಗುಜರಾತ್‌ನ ಆನಂದ್ ಪಟ್ಟಣದಲ್ಲಿ ಖೇಡಾ ಮತ್ತು ಆನಂದ್ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ‘ವೋಟ್ ಫಾರ್ ಜಿಹಾದ್’ ಎಂದು ಸಲ್ಮಾನ್ ಖುರ್ಷಿದ್ ಅವರ ಸೋದರ ಸೊಸೆ ಮಾರಿಯಾ ಅಲಂ ನೀಡಿದ್ದಾರೆನ್ನಲಾದ ಹೇಳಿಕೆ ಬಗ್ಗೆಯೂ ಕಿಡಿಕಾರಿದ್ದಾರೆ.
ಈಗ ‘ಇಂಡಿ’ಮೈತ್ರಿಕೂಟವು ‘ವೋಟ್ ಫಾರ್ ಜಿಹಾದ್’ಗೆ ಕರೆ ನೀಡಿದೆ. ಈ ಹಿಂದೆ ನಾವು ‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ಅನ್ನು ನೋಡಿದ್ದೇವೆ. ಇದನ್ನು ಹೇಳಿದವರು ಒಂದು ವಿದ್ಯಾವಂತ ಕುಟುಂಬದಿಂದ ಬಂದವರಾಗಿದ್ದಾರೆ. ಅವರು ಯಾವುದೇ ಮದರಸಾದಲ್ಲಿ ಕಲಿತವರಲ್ಲ. ಜಿಹಾದ್ ಅರ್ಥ ಏನು ಎಂದು ನಿಮಗೆಲ್ಲರಿಗೂ ತಿಳಿದಿದೆ ಎಂದು ನಾನು ನಂಬುತ್ತೇನೆ. ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ. ಯಾವೊಬ್ಬ ಕಾಂಗ್ರೆಸ್ಸಿಗನೂ ಇದನ್ನೂ ಖಂಡಿಸಿಲ್ಲ’ಎಂದು ಮೋದಿ ಹೇಳಿದ್ದಾರೆ.
ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗೆ ಇರುವ ಮೀಸಲಾತಿಯನ್ನು ಮುಸಲ್ಮಾನರಿಗೆ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್, ದೇಶದ ಸಂವಿಧಾನ ಬದಲಾಯಿಸಲು ಬಯಸುತ್ತಿದೆ ಎಂದು ಆರೋಪಿಸಿದ್ದಾರೆ.
ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದಿಲ್ಲ ಎಂದು ಬರೆದು ಕೊಡುವಂತೆ ಕಾಂಗ್ರೆಸ್‌ಗೆ ಮೋದಿ ಸವಾಲು ಹಾಕಿದ್ದಾರೆ.
ಜಗತ್ತಿನಲ್ಲಿ ಭಾರತವನ್ನು ಶಾಂತಿಧೂತನಂತೆ ನೋಡಲಾಗುತ್ತಿದೆ. 2047ರ ಹೊತ್ತಿಗೆ ದೇಶವನ್ನು ಅಭಿವೃದ್ಧಿ ಹೊಂದಿದ ದೇಶ ಮಾಡಲು 24 ಗಂಟೆ ಶ್ರಮಿಸುವ ವಾಗ್ದಾನವನ್ನು ಮಾಡುತ್ತೇನೆ ಎಂದು ಪ್ರಧಾನಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.