ನವದೆಹಲಿ:ದೇಶದಲ್ಲಿ ಸರಣಿ ಸ್ಫೋಟಗಳಿಗೆ ಸಂಚು ರೂಪಿಸುತ್ತಿದ್ದ ಉಗ್ರರ ಯೋಜನೆಗಳು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ನಡೆಸಿದ ಕಾರ್ಯಾಚರಣೆಯಿಂದ ಬಹಿರಂಗಗೊಂಡಿವೆ. ಉತ್ತರ ಪ್ರದೇಶ ಮತ್ತು ದೆಹಲಿಯ 17 ಸ್ಥಳಗಳಲ್ಲಿ ಎನ್‌ಐಎ ದಾಳಿ ನಡೆಸಿ, ಹತ್ತು ಮಂದಿಯನ್ನು ವಶಕ್ಕೆ ಪಡೆದಿದೆ.
ಐಎಸ್‌ಐಎಸ್ ಉಗ್ರ ಸಂಘಟನೆಯ ನಂಟಿನೊಂದಿಗೆ ’ಹರ್ಕತ್ ಉಲ್ ಹರ್ಬ್ ಎ ಇಸ್ಲಾಂ’ ದೇಶದಲ್ಲಿ ಸರಣಿ ಸ್ಫೋಟಗಳಿಗೆ ರೂಪಿಸಿದ್ದ ಯೋಜನೆ ಬಹುತೇಕ ಅಂತಿಮ ಹಂತದಲ್ಲಿತ್ತು ಎಂದು ಎನ್‌ಐಎ ಮಹಾನಿರ್ದೇಶಕ ಬುಧವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ದೆಹಲಿಯ ಸೀಲಂಪುರ್, ಉತ್ತರ ಪ್ರದೇಶದ ಅಮರೋಹಾ, ಹಾಪುರ್, ಮೀರತ್ ಹಾಗೂ ಲಖನೌ ಸೇರಿದಂತೆ ವಿವಿಧೆಡೆ ಶೋಧ ಕಾರ್ಯ ನಡೆದಿದೆ. ಬೃಹತ್‌ಪ್ರಮಾಣದಲ್ಲಿ ಸ್ಫೋಟಕ ಸಾಮಾಗ್ರಿ, ಶಸ್ತ್ರಾಸ್ತ್ರಗಳು, ಸ್ಥಳೀಯವಾಗಿ ಸಿದ್ಧಪಡಿಸಿರುವ ರಾಕೆಟ್ ಲಾಂಚರ್ ವಶಪಡಿಸಿಕೊಳ್ಳಲಾಗಿದೆ.
ಸುಮಾರು 100 ಮೊಬೈಲ್ ಫೋನ್‌ಗಳು, 135 ಸಿಮ್ ಕಾರ್ಡ್‌ಗಳು, ಲ್ಯಾಪ್‌ಟಾಪ್‌ಗಳು, ಮೆಮೊರಿ ಕಾರ್ಡ್‌ಗಳು ಹಾಗೂ ₹7.5 ಲಕ್ಷ ಹಣ ಜಪ್ತಿ ಮಾಡಲಾಗಿದೆ. ಶೋಧ ಕಾರ್ಯ ಇನ್ನೂ ಮುಂದುವರಿದಿದೆ, ಪ್ರಸ್ತುತ 16 ಮಂದಿ ಶಂಕಿತರ ವಿಚಾರ ನಡೆಸಿ, 10 ಬಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಟಾರ್ಗೆಟ್: ಪ್ರಮುಖ ರಾಜಕಾರಣಿಗಳು ಹಾಗೂ ಇತರೆ ಗಣ್ಯ ವ್ಯಕ್ತಿಗಳನ್ನು ಗುರಿಯಾಗಿಸಿ ಉಗ್ರರು ಕಾರ್ಯಾಚರಣೆ ನಡೆಸಿದ್ದರು. ಭದ್ರತಾ ವಲಯಗಳು, ಪ್ರಮುಖ ಸ್ಥಳಗಳಲ್ಲಿ ಸ್ಫೋಟ ನಡೆಸಲು ಯೋಜನೆ ರೂಪಿಸಲಾಗಿತ್ತು. ಮುಂದಿನ ದಿನಗಳಲ್ಲಿ ರಿಮೋಟ್ ಕಂಟ್ರೋಲ್ ಮೂಲಕ ಸ್ಫೋಟ ನಡೆಸುವುದು, ಆತ್ಮಾಹುತಿ (ಫಿದಾಯಿನ್) ದಾಳಿಗಳನ್ನು ನಡೆಸಲು ಸಿದ್ಧತೆ ನಡೆಸಿದ್ದರು.
ಐಎಸ್‌ಐಎಸ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಬೆಳೆಸಿಕೊಂಡಿರುವ ಹೊಸ ಗುಂಪು ಎಂದು ವಿಶ್ಲೇಷಿಸಲಾಗಿದ್ದು, ಇಲ್ಲಿನ ಸದಸ್ಯರು ವಿದೇಶಿ ಏಜೆಂಟ್‌ನೊಂದಿಗೆ ಸಂಪರ್ಕದಲ್ಲಿರುವುದನ್ನು ಪತ್ತೆ ಮಾಡಲಾಗಿದೆ. ಉತ್ತರ ಪ್ರದೇಶದ ಅಮರೋಹಾ ಮೂಲದ ಮುಫ್ತಿ ಸೊಹೈಲ್ ಈ ತಂಡದ ನಾಯಕ. ಈತ ದೆಹಲಿಯಲ್ಲಿ ವಾಸಿಸುತ್ತಿದ್ದು, ಮಸೀದಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.
ಸಂಘಟನೆ ಖರ್ಚಿಗೆ ಕಳ್ಳತನ
ಸಂಘಟನೆಗಾಗಿ ಹಣ ಹೊಂದಿಸಲು ಇವರೆಲ್ಲರೂ ಕಳ್ಳತನ ಮಾಡುತ್ತಿದ್ದರು. ಕಳ್ಳತನ ಮಾಡಿ ಅದನ್ನು ಮಾರಾಟ ಮಾಡಿದ್ದರು. ಪರಸ್ಪರ ಸಂಪರ್ಕಕ್ಕಾಗಿ ವಾಟ್ಸ್‌ಆ್ಯಪ್ ಮತ್ತು ಟೆಲಿಗ್ರಾಂ ಬಳಸುತ್ತಿದ್ದರು ಎಂದು ಎನ್‌ಐಎ ಐಜಿ ಅಲೋಕ್ ಮಿತ್ತಲ್ ತಿಳಿಸಿದ್ದಾರೆ. ‘ಬಂಧಿತರೆಲ್ಲರೂ 20 ರಿಂದ 30 ವರ್ಷ ವಯಸ್ಸಿನವರಿದ್ದು, ಮೂರ‍್ನಾಲ್ಕು ತಿಂಗಳಿಂದ ಸಂಘಟನೆಯಲ್ಲಿ ತೊಡಗಿದ್ದರು. ಸಂಘಟನೆಯ ಚಟುವಟಿಕೆ ಬಗ್ಗೆ ಮಾಹಿತಿ ಕಲೆಹಾಕಿ ಕಾರ್ಯಾಚರಣೆ ನಡೆಸಲಾಯಿತು’ ಎಂದು ಹೇಳಿದ್ದಾರೆ.
ಗುಂಡು ನಿರೋಧಕ ಜಾಕೆಟ್ ಪಡೆಯಲು ಯತ್ನ
ಶಂಕಿತರು ಗುಂಡು ನಿರೋಧಕ ಜಾಕೆಟ್ ಪಡೆಯಲು ಪ್ರಯತ್ನಿಸಿದ್ದರು ಎಂಬ ಮಾಹಿತಿಯನ್ನು ಎನ್‌ಐಎ ಬಹಿರಂಗಪಡಿಸಿದೆ.
ಉತ್ತರ ಪ್ರದೇಶ ಭಯೋತ್ಪಾದಕ ನಿಗ್ರಹ ದಳದ ಜೊತೆ ಲಖನೌ, ಅಮರೋಹ ಹಾಗೂ ಹಾಪುರ್ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಲಾಯಿತು ಎಂದು ಎನ್‌ಐಎ ಐಜಿ ಅಲೋಕ್ ಮಿತ್ತಲ್ ಪತ್ರಕರ್ತರಿಗೆ ತಿಳಿಸಿದರು.
ದೆಹಲಿಯ ಸೀಲಾಂಪುರ್ ಪ್ರದೇಶದಲ್ಲಿ ವಿಶೇಷ ಘಟಕದ ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.