ನವದೆಹಲಿ: ಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆಗೆ ಧನಸಹಾಯ ಮಾಡಿದ ಆರೋಪದಡಿ ಜಮ್ಮು–ಕಾಶ್ಮೀರ ಪ್ರತ್ಯೇಕವಾದಿ ಮುಖಂಡ ಶಬೀರ್ ಅಹ್ಮದ್ ಶಾ ಎಂಬಾತನ ಶ್ರೀನಗರದ ಮನೆಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರ ಜಪ್ತಿ ಮಾಡಿಕೊಂಡಿದೆ.
ಶ್ರೀನಗರದ ಸನತ್ ನಗರದ ಬೋಟ್ಶಾ ಕಾಲೋನಿಯಲ್ಲಿರುವ ಶಬೀರ್ ಮನೆ ₹ 21.80 ಲಕ್ಷ ಮೌಲ್ಯ ಹೊಂದಿದ್ದು, ಪಾಕಿಸ್ತಾನ ಮೂಲದ ಹಿಜಬ್–ಉಲ್– ಮುಜವುದ್ದೀನ್ (ಹೆಚ್‌ಎಂ) ಹಾಗೂ ಇತರ ಭಯೋತ್ಪಾದನಾ ಸಂಘಟನೆಗಳಿಂದ ಹಣ ಪಡೆದಿದ್ದ. ಅದನ್ನು ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಉಗ್ರಗಾಮಿ ಚಟುವಟಿಕೆಗೆ ಬೆಂಬಲ ನೀಡಲು ಬಳಸಿರುವುದಾಗಿ ಇ.ಡಿ ಹೇಳಿಕೆಯಲ್ಲಿ ತಿಳಿಸಿದೆ.
2017ರಲ್ಲಿ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ಯುಎಪಿಎ ಕಾಯ್ದೆಯಡಿಯಲ್ಲಿ ಲಷ್ಕರ್ –ಎ–ತಯಬಾ ಸಂಘಟನೆಯ ಉಗ್ರ ಹಫೀಜ್ ಸಯೀದ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿತ್ತು. ಈ ಎಫ್‌ಐಆರ್‌ನಲ್ಲಿ ಶಬೀರ್ ಹೆಸರು ಸಹ ಉಲ್ಲೇಖವಾಗಿತ್ತು. ಇದರ ಆಧಾರದಲ್ಲಿ ಇದೀಗ ಶಬೀರ್ ಆಸ್ತಿಯನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಈತ ಕಾಶ್ಮೀರಕಣಿವೆಯಲ್ಲಿ ಮೆರವಣಿಗೆ, ಬಂದ್, ಹರತಾಳ, ಕಲ್ಲು ತೂರಾಟ ಹಾಗೂ ಗಲಭೆಗಳಿಗೆ ಕುಮ್ಮಕ್ಕು ನೀಡುವ ಕಾರ್ಯದಲ್ಲಿ ಸಕ್ರಿಯನಾಗಿದ್ದ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.