ಶ್ರೀನಗರ: ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಗುರುವಾರ ಉಗ್ರರು ಸೇನಾ ವಾಹನದ ಮೇಲೆ ಹೊಂಚುದಾಳಿ ನಡೆಸಿದ್ದು, ಇಬ್ಬರು ಯೋಧರು ಮತ್ತು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಮೂವರು ಸೈನಿಕರು ಗಾಯಗೊಂಡಿದ್ದಾರೆ.
ಜಿಲ್ಲೆಯ ಗುಲ್ಮಾರ್ಗ್‌ನ ಪ್ರಸಿದ್ಧ ಸ್ಕೀ-ರೆಸಾರ್ಟ್ ಬಳಿಯ ಬೋಟಪಾತ್ರ ಪ್ರದೇಶದಲ್ಲಿ ಭಾರಿ ಶಸ್ತ್ರಸಜ್ಜಿತ ಭಯೋತ್ಪಾದಕರು, 18ನೇ ರಾಷ್ಟ್ರೀಯ ರೈಫಲ್ಸ್‌ನ (ಆರ್‌ಆರ್) ಸೇನಾ ವಾಹನದ ಮೇಲೆ ಬೋಟಪಾತ್ರದ ನಾಗಿನ್ ಧೋಕ್ ಪ್ರದೇಶದಲ್ಲಿ ಹಠಾತ್ ಗುಂಡು ಹಾರಿಸಿದ್ದಾರೆ. ನಾಗರಿಕ ಸಂಚಾರಕ್ಕೆ ನಿರ್ಬಂಧವಿರುವ ಈ ಪ್ರದೇಶವು ಗುಲ್ಮಾರ್ಗ್ ಸ್ಕೀ-ರೆಸಾರ್ಟ್‌ನಿಂದ ಸುಮಾರು ಏಳು ಕಿಲೋಮೀಟರ್ ದೂರದಲ್ಲಿದ್ದು, ಗಡಿ ನಿಯಂತ್ರಣ ರೇಖೆಗೆ (ಎಲ್‌ಒಸಿ) ಹತ್ತಿರದಲ್ಲಿದೆ.
‘ಇಬ್ಬರು ಸೈನಿಕರು ಮತ್ತು ಸೇನೆಗಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಮೂವರು ಸೈನಿಕರು ಗಾಯಗೊಂಡಿದ್ದಾರೆ. ಉಗ್ರರು ದಟ್ಟ ಅರಣ್ಯ ಪ್ರದೇಶಕ್ಕೆ ಪರಾರಿಯಾಗುವುದನ್ನು ತಡೆಯಲು ಇಡೀ ಪ್ರದೇಶವನ್ನು ಸೇನೆ ಸುತ್ತುವರಿದಿದೆ. ದಾಳಿ ನಡೆದಿರುವ ಪ್ರದೇಶಕ್ಕೆ ಹೆಚ್ಚಿನ ಸೇನೆಯನ್ನು ನಿಯೋಜಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ನಾಗಿನ್ ಪೋಸ್ಟ್ ಸುತ್ತಮುತ್ತ ಬಾರಾಮುಲ್ಲಾ ಜಿಲ್ಲೆಯ ಬೋಟಪತ್ರ್ ವಲಯದಲ್ಲಿ ಸೇನೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ’ ಎಂದು ಇದಕ್ಕೂ ಮೊದಲು, ಬಾರಾಮುಲ್ಲಾ ಪೊಲೀಸರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು.
ಉಗ್ರರ ದಾಳಿ ನಡೆದಿರುವ ಈ ಪ್ರದೇಶ ಸಾಮಾನ್ಯವಾಗಿ, ಭಯೋತ್ಪಾದಕ ಮುಕ್ತ ಪ್ರದೇಶವೆನಿಸಿತ್ತು. ಗುಲ್ಮಾರ್ಗ್ ಮತ್ತು ಅದರ ಮೇಲ್ಭಾಗದ ಬೋಟಪತ್ರಿ ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತದೆ. ಈ ಸ್ಥಳವು ಪ್ರಕೃತಿ ಪ್ರಿಯರಿಗೆ ನೆಚ್ಚಿನ ತಾಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.