ವಿಶ್ವಸಂಸ್ಥೆ: ಗಾಜಾ ಪಟ್ಟಿಯಲ್ಲಿ ಇಸ್ರೇಲ್– ಪ್ಯಾಲೆಸ್ಟೀನ್ ತಕ್ಷಣ ಕದನವಿರಾಮವನ್ನು ಘೋಷಿಸಬೇಕು ಮತ್ತು ಮಾನವೀಯ ನೆರವಿಗೂ ಅನುವು ಮಾಡಿಕೊಡಬೇಕು ಎಂಬ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದಿಂದ ಭಾರತ ಹೊರಗುಳಿದಿದೆ.
‘ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆದ ದಾಳಿಯನ್ನು ನಿರ್ಣಯದಲ್ಲಿ ಖಂಡಿಸಿಲ್ಲ. ಭಯೋತ್ಪಾದನೆ ಮಾರಕ. ಅದಕ್ಕೆ ಗಡಿ, ರಾಷ್ಟ್ರೀಯತೆ, ಜನಾಂಗ ಎಂಬುದಿಲ್ಲ. ಭಯೋತ್ಪಾದನಾ ಕೃತ್ಯದ ಯಾವುದೇ ಸಮರ್ಥನೆಯಲ್ಲಿ ವಿಶ್ವ ಭಾಗಿಯಾಗಬಾರದು’ ಎಂದು ಭಾರತ ಈ ಸಂದರ್ಭದಲ್ಲಿ ಹೇಳಿದೆ.
ಕದನ ವಿರಾಮ ಘೋಷಿಸಬೇಕೆಂದು ಒತ್ತಾಯಿಸುವ ನಿರ್ಣಯವನ್ನು193 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ವಿಶ್ವಸಂಸ್ಥೆಯು ಅಂಗೀಕರಿಸಿತು. ನಿರ್ಣಯದ ಪರ 121 ಸದಸ್ಯ ರಾಷ್ಟ್ರಗಳು ಮತ ಚಲಾಯಿಸಿದರೆ, 14 ರಾಷ್ಟ್ರಗಳು ವಿರುದ್ಧ ಮತ ಚಲಾಯಿಸಿದವು. ಭಾರತ, ಆಸ್ಟ್ರೇಲಿಯಾ, ಜರ್ಮನಿ, ಕೆನಡಾ, ಜಪಾನ್, ಉಕ್ರೇನ್, ಬ್ರಿಟನ್ ಸೇರಿ 44 ದೇಶಗಳು ನಿರ್ಣಯದಿಂದ ಹೊರಗುಳಿದವು.
ಇಸ್ರೇಲ್ ಮತ್ತು ಅಮೆರಿಕ, ನಿರ್ಣಯದ ವಿರುದ್ಧ ಮತ ಚಲಾಯಿಸಿದರೆ, ಚೀನಾ, ಫ್ರಾನ್ಸ್, ರಷ್ಯಾ ನಿರ್ಣಯದ ಪರ ಮತ ಹಾಕಿದವು.
‘ನಾಗರಿಕರ ರಕ್ಷಣೆ ಹಾಗೂ ಕಾನೂನು ಮತ್ತು ಮಾನವೀಯ ಹೊಣೆಗಾರಿಕೆ ಎತ್ತಿಹಿಡಿಯುವುದು’ ಎಂಬ ಘೋಷ ವಾಕ್ಯದ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ಮಂಡಿಸಲಾಯಿತು. ಗಾಜಾದಲ್ಲಿ ಮಾನವೀಯ ನೆಲೆಯಲ್ಲಿ ಕದನ ವಿರಾಮ ಘೋಷಿಸಬೇಕೆಂಬ ನಿರ್ಣಯಕ್ಕೆ ಸದಸ್ಯ ರಾಷ್ಟ್ರಗಳ ಒಪ್ಪಿಗೆ ಕೋರಲಾಯಿತು.
ನಿರ್ಣಯದ ಕರಡನ್ನು ಜೋರ್ಡಾನ್ ರೂಪಿಸಿ ಮಂಡಿಸಿದ್ದು, ಗಾಜಾ ಪಟ್ಟಿಗೆ ಮಾನವೀಯ ನೆಲೆಯಲ್ಲಿ ಅನಿರ್ಬಂಧಿತವಾಗಿ ನೆರವು ಮುಂದುವರಿಸಬೇಕೆಂದು ಒತ್ತಿ ಹೇಳಿದೆ.
ಭಾರತದ ಪ್ರತಿಪಾದನೆ: ಭಾರತದ ನಿರ್ಧಾರ ಕುರಿತು ಮಾತನಾಡಿದ ವಿಶ್ವಸಂಸ್ಥೆ ರಾಯಭಾರಿಗೆ ಭಾರತದ ಉಪ ಕಾಯಂ ಪ್ರತಿನಿಧಿಯಾಗಿರುವ ಯೋಜನಾ ಪಟೇಲ್, ‘ವಿಶ್ವದಲ್ಲಿ ಭಿನ್ನಾಭಿಪ್ರಾಯ ಮತ್ತು ವಿವಾದಗಳನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳಲಾಗುತ್ತಿದೆ. ಹಿಂಸಾಚಾರಕ್ಕೆ ಆಶ್ರಯ ನೀಡುವ ಬಗ್ಗೆ ಈ ಸಭೆಯು ತೀವ್ರ ಕಾಳಜಿ ವಹಿಸಬೇಕು’ ಎಂದರು.
ರಾಜಕೀಯ ಉದ್ದೇಶ ಸಾಧನೆಯ ಗುರಿ ಹೊಂದಿರುವ ಹಿಂಸಾಚಾರವು ಭಾರಿ ಹಾನಿ ಉಂಟು ಮಾಡುವುದಲ್ಲದೆ ಯಾವುದೇ ದೀರ್ಘಕಾಲೀನ ಪರಿಹಾರಕ್ಕೆ ದಾರಿ ತೋರುವುದಿಲ್ಲ ಎಂದು ಹೇಳಿದರು.
ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆದ ದಾಳಿಯನ್ನು ಆಘಾತಕಾರಿ ಎಂದ ಅವರು, ಈ ಕೃತ್ಯವು ಖಂಡನೆಗೆ ಅರ್ಹವಾಗಿದೆ ಎಂದರು.
‘ಭಿನ್ನಾಭಿಪ್ರಾಯ ಬದಿಗಿರಿಸೋಣ, ಭಯೋತ್ಪಾದನೆಯನ್ನು ಒಗ್ಗೂಡಿ, ಶೂನ್ಯ ಸಹಿಷ್ಣುತೆಯಿಂದ ಎದುರಿಸೋಣ. ಈಗ ನಡೆಯುತ್ತಿರುವ ಸಂಘರ್ಷದಲ್ಲಿ ನಾಗರಿಕರ ಜೀವ ಹಾನಿಯಾಗುತ್ತಿರುವ ಬಗ್ಗೆ ಭಾರತಕ್ಕೆ ತೀವ್ರ ಆತಂಕವಿದೆ. ಎಲ್ಲಾ ರಾಷ್ಟ್ರಗಳು ಹೊಣೆಗಾರಿಕೆಯನ್ನು ಪ್ರದರ್ಶಿಸುವ ಅಗತ್ಯವಿದೆ ’ ಎಂದರು.
ಒತ್ತೆಯಾಳುಗಳನ್ನು ತಕ್ಷಣ ಬೇಷರತ್ತಾಗಿ ಬಿಡುಗಡೆ ಮಾಡಬೇಕು ಎಂದು ಕೂಡ ಭಾರತ ಒತ್ತಾಯಿಸಿತು. ಭಾರತದ ವಿವರಣೆಯಲ್ಲಿ ಹಮಾಸ್‌ನ ಉಲ್ಲೇಖ ಇಲ್ಲ.
ಇದಕ್ಕೂ ಮೊದಲು ನಿರ್ಣಯದಿಂದ ಹೊರಗುಳಿದ ಇರಾಕ್ ನಂತರದಲ್ಲಿ ತನ್ನ ಮತವನ್ನು ಬದಲು ಮಾಡಿ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿತು. ಮತ ಹಾಕುವಾಗ ತಾಂತ್ರಿಕ ದೋಷ ಉಂಟಾಗಿದ್ದಾಗಿ ಹೇಳಿತು.
‘ಗಾಜಾದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾನವೀಯ ನೆಲೆಯಲ್ಲಿ ಪರಿಹರಿಸಬೇಕು. ಇದಕ್ಕಾಗಿ ಅಂತರರಾಷ್ಟ್ರೀಯ ಸಮುದಾಯದ ಯತ್ನ ಸ್ವಾಗತಾರ್ಹ. ಭಾರತ ಕೂಡ ಈ ಪ್ರಯತ್ನಕ್ಕೆ ಕೈಜೋಡಿಸಿದೆ. ಔಷಧಗಳು ಸೇರಿದಂತೆ 38 ಟನ್‌ಗಳಷ್ಟು ಪರಿಹಾರ ಸಾಮಗ್ರಿಗಳನ್ನು ಭಾರತ ಪ್ಯಾಲೆಸ್ಟೀನಿಯನ್ನರಿಗೆ ಕಳುಹಿಸಿದೆ’ ಎಂದು ಯೋಜನಾ ಪಟೇಲ್ ಹೇಳಿದರು.
ಇಸ್ರೇಲ್– ಪ್ಯಾಲೆಸ್ಟೀನ್ ಸಂಘರ್ಷಕ್ಕೆ ದ್ವಿರಾಷ್ಟ್ರದ ಪರಿಹಾರವನ್ನು ಭಾರತ ಯಾವಾಗಲೂ ಬೆಂಬಲಿಸಿದೆ. ಇದಕ್ಕಾಗಿ ಎಲ್ಲರೂ ಕಾರ್ಯೋನ್ಮುಖರಾಗಬೇಕು ಎಂದು ಒತ್ತಾಯಿಸುವುದಾಗಿ ತಿಳಿಸಿದರು.
ನಿರ್ಣಯದಲ್ಲಿ ಏನಿದೆ?: ಗಾಜಾಪಟ್ಟಿಯಲ್ಲಿ ಮಾನವೀಯ ತತ್ವಗಳನ್ನು ಎತ್ತಿ ಹಿಡಿದಿರುವ ಮತ್ತು ನಾಗರಿಕರಿಗೆ ತುರ್ತು ನೆರವು ಒದಗಿಸುತ್ತಿರುವ ರೆಡ್‌ಕ್ರಾಸ್ ಮತ್ತು ಇತರ ಸಂಘ ಸಂಸ್ಥೆಗಳಿಗೆ, ಪ್ಯಾಲೆಸ್ಟೀನ್ ನಿರಾಶ್ರಿತರಿಗೆ ನೆರವು ಒದಗಿಸುತ್ತಿರುವ ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾಮಗಾರಿ ಸಂಸ್ಥೆಗೆ ಯಾವುದೇ ಅಡ್ಡಿ ಆತಂಕ ಒಡ್ಡಬಾರದು. ಈ ಸಂಸ್ಥೆಗಳು ತಕ್ಷಣ, ಪೂರ್ಣ ಪ್ರಮಾಣದಲ್ಲಿ ಮಾನವೀಯ ನೆರವು ಒದಗಿಸಲು ಅವಕಾಶ ನೀಡಬೇಕು ಎಂದು ನಿರ್ಣಯ ಕರೆ ನೀಡಿದೆ.
ಹಮಾಸ್ ಉಲ್ಲೇಖವನ್ನು ನಿರ್ಣಯದಲ್ಲೆಲ್ಲೂ ಮಾಡಿಲ್ಲ ಎಂದು ಅಮೆರಿಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.