ಸಹರಾನ್ಪುರ (ಉತ್ತರ ಪ್ರದೇಶ): 1993ರ ದಿಯೋಬಂದ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ನಜೀರ್ ಅಹ್ಮದ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಗರದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಸ್ಥಳೀಯ ಪೊಲೀಸರು ಬರೋಬ್ಬರಿ 31 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ನಜೀರ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
1992ರಲ್ಲಿ ಬಾಬರಿ ಮಸೀದಿ ಧ್ವಂಸದ ಬಳಿಕ ದೇಶದ ವಿವಿಧ ಭಾಗಗಳಲ್ಲಿ ಕೋಮುಗಲಭೆಗಳು ನಡೆದವು. ಇದೇ ಅವಧಿಯಲ್ಲಿ ದಿಯೋಬಂದ್‌ನ ಹಲವೆಡೆ ಹಿಂಸಾಚಾರದ ಘಟನೆಗಳು ನಡೆದವು. 1993ರ ಆಗಸ್ಟ್ ನಲ್ಲಿ ನಡೆದ ಹಿಂಸಾಚಾರದ ವೇಳೆ ನಜೀರ್ ಮತ್ತು ಆತನ ಸಹಚರರು ಪೊಲೀಸ್ ಸಿಬ್ಬಂದಿಯನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆಸಿದ್ದರು. ಘಟನೆಯಲ್ಲಿ ಇಬ್ಬರು ಅಧಿಕಾರಿಗಳು ಸೇರಿದಂತೆ ನಾಲ್ವರು ಗಾಯಗೊಂಡಿದ್ದರು.
ಈ ಪ್ರಕರಣದಲ್ಲಿ ನಜೀರ್‌ನನ್ನು ಬಂಧಿಸಲಾಗಿತ್ತು. ಬಳಿಕ 1994ರಲ್ಲಿ ನ್ಯಾಯಾಲಯ ಆತನಿಗೆ ಜಾಮೀನು ನೀಡಿತ್ತು. ಜಾಮೀನು ಪಡೆದ ಬಳಿಕ ಆತ ವಿಚಾರಣೆಗೆ ಹಾಜರಾಗದೆ 31 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಹೀಗಾಗಿ ಆತನ ವಿರುದ್ಧ , 2024ರ ಮೇ 20ರಂದು ಜಮೀನು ರಹಿತ ವಾರೆಂಟ್ ಹೊರಡಿಸಲಾಗಿತ್ತು.
ಖಚಿತ ಮಾಹಿತಿ ಮೇರೆಗೆ ಭಾನುವಾರ ಕಾರ್ಯಾಚರಣೆ ನಡೆಸಿದ ಎಟಿಎಸ್ ಮತ್ತು ದಿಯೋಬಂದ್ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.