ADVERTISEMENT

ಉಗ್ರರ ದಾಳಿಗೆ ಪ್ರಧಾನಿ, ಸಚಿವರಿಂದ ಆಕ್ರೋಶ: ಯೋಧರ ತ್ಯಾಗಕ್ಕೆ ಪ್ರತೀಕಾರ ಖಚಿತ

ಗೃಹ ಸಚಿವ ರಾಜನಾಥ್‌ ಶುಕ್ರವಾರ ಶ್ರೀನಗರಕ್ಕೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2019, 4:12 IST
Last Updated 15 ಫೆಬ್ರುವರಿ 2019, 4:12 IST
ಯೋಧರ ಮೃತದೇಹಗಳನ್ನು್ ಸೈನಿಕರು ಸಾಗಿಸಿದರು –ಪಿಟಿಐ ಚಿತ್ರ
ಯೋಧರ ಮೃತದೇಹಗಳನ್ನು್ ಸೈನಿಕರು ಸಾಗಿಸಿದರು –ಪಿಟಿಐ ಚಿತ್ರ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರುಕಾಶ್ಮೀರದ ಪುಲ್ವಾಮಾದಲ್ಲಿನ ಭಯೋತ್ಪಾದಕ ದಾಳಿಯ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಢೊಬಾಲ್‌ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಲಖನೌದಲ್ಲಿದ್ದ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ದೆಹಲಿಗೆ ಧಾವಿಸಿದ್ದಾರೆ. ಕೇಂದ್ರದ ಹಲವು ಸಚಿವರು ಪ್ರತೀಕಾರದ ಬಗ್ಗೆ ಮಾತನಾಡಿದ್ದಾರೆ.

ಬಿಹಾರದ ಪಟ್ನಾದಲ್ಲಿನ ಕಾರ್ಯಕ್ರಮಗಳನ್ನು ರಾಜನಾಥ್‌ ಅವರು ರದ್ದುಪಡಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯಪಾಲ ಮಲಿಕ್‌ ಮತ್ತು ಸಿಆರ್‌ಪಿಎಫ್‌ ಮಹಾ ನಿರ್ದೇಶಕ ರಾಜೀವ್‌ ರಾಯ್‌ ಭಟ್ನಾಗರ್‌ ಜತೆಗೆ ಅವರು ಚರ್ಚಿಸಿದ್ದಾರೆ. ಈ ಇಬ್ಬರೂ ಪ್ರಯಾಗರಾಜ್‌ನಿಂದ ದೆಹಲಿಗೆ ದೌಡಾಯಿಸಿದ್ದಾರೆ. ಭೂತಾನ್‌ ಪ್ರವಾಸದಲ್ಲಿರುವ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್‌ ಗೌಬಾ ಅವರು ದೆಹಲಿಗೆ ಹಿಂದಿರುಗಲಿದ್ದಾರೆ.

‘ಹುತಾತ್ಮ ಸೈನಿಕರ ಕುಟುಂಬದ ಜತೆಗೆ ಇಡೀ ದೇಶ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲಿದೆ. ಗಾಯಗೊಂಡವರು ಬೇಗನೆ ಗುಣಮುಖರಾಗಲಿ. ಗೃಹ ಸಚಿವ ರಾಜನಾಥ್‌ ಸಿಂಗ್‌ ಜತೆಗೆ ದಾಳಿಗೆ ಸಂಬಂಧಿಸಿದಂತೆ ಮಾತನಾಡಿದ್ದೇನೆ’ ಎಂದು ಮೋದಿ ಹೇಳಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪುಕ್ಕಲು ಕೃತ್ಯವು ಶಿಕ್ಷೆಯಿಂದ ತಪ್ಪಿಸಿಕೊಳ್ಳಲಾಗದು. ನಾವು ಖಂಡಿತವಾಗಿಯೂ ಸೇಡು ತೀರಿಸಿಕೊಳ್ಳುತ್ತೇವೆ’ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಸಚಿವ ಹಂಸರಾಜ್‌ ಅಹಿರ್‌ ಅವರೂ ಪ್ರತೀಕಾರ ಮಾಡುವುದಾಗಿ ಹೇಳಿದ್ದಾರೆ.

10 ಕಿ.ಮೀ ದೂರಕ್ಕೆ ಸದ್ದು

ಶ್ರೀನಗರ (ಪಿಟಿಐ): ಭಯಾನಕ ಕಾರ್‌ ಬಾಂಬ್ ಸ್ಫೋಟದ ಸದ್ದು ಘಟನಾ ಸ್ಥಳದಿಂದ 10ರಿಂದ 12 ಕಿಲೋಮೀಟರ್‌ ದೂರದ ಪ್ರದೇಶದವರೆಗೂ ಕೇಳಿಸಿತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನಾ ಸ್ಥಳದಿಂದ ಕೇವಲ 300 ಮೀಟರ್ ದೂರದಲ್ಲಿರುವ ಲೆಥ್‌ಪೊರಾ ಮಾರುಕಟ್ಟೆಯಲ್ಲಿದ್ದ ಜನರು, ಸ್ಫೋಟದ ಸದ್ದಿಗೆ ಬೆಚ್ಚಿಬಿದ್ದು, ಸುರಕ್ಷಿತ ಸ್ಥಳಗಳತ್ತ ಓಡಲು ಶುರುಮಾಡಿದರು.

ಸ್ಫೋಟದ ರಭಸಕ್ಕೆ, ಉಗ್ರ ಹಾಗೂ ಸಿಆರ್‌ಪಿಎಫ್ ಸಿಬ್ಬಂದಿಯ ಮೃತದೇಹದ ತುಂಡುಗಳು ಜಮ್ಮು–ಶ್ರೀನಗರ ಹೆದ್ದಾರಿಯಲ್ಲಿ ಚೆಲ್ಲಾಡಿದ್ದವು. ಇನ್ನೂ ಕೆಲವು ಮೃತದೇಹಗಳು ಗುರುತು ಸಿಗಲಾರದ ರೀತಿಯಲ್ಲಿ ಛಿದ್ರಗೊಂಡಿದ್ದು, ಗುರುತು ಹಿಡಿಯಲು ಸಾಕಷ್ಟು ಸಮಯ ಹಿಡಿಯಲಿದೆ.2017ರ‌ಲ್ಲಿ ಜೈಷ್‌ ಎ ಮೊಹಮ್ಮದ್ ಉಗ್ರರು ದಾಳಿ ನಡೆಸಿದ್ದ ಲೆಥ್‌ಪೊರಾ ಕಮಾಂಡೊ ತರಬೇತಿ ಕೇಂದ್ರಕ್ಕೆ ಸಮೀಪದಲ್ಲೇ ಈ ಘಟನೆ ನಡೆದಿದೆ.2001ರಲ್ಲಿ ಜಮ್ಮು–ಕಾಶ್ಮೀರ ವಿಧಾನಸಭೆ ಮೇಲಿನ ಕಾರ್‌ಬಾಂಬ್ ದಾಳಿಯ ಬಳಿಕ ನಡೆದ ಮೊದಲ ಕಾರ್‌ಬಾಂಬ್ ದಾಳಿ ಇದಾಗಿದೆ.

ಎಲ್ಲಿ ಹೋಯಿತು 56 ಇಂಚಿನ ಎದೆ: ಕಾಂಗ್ರೆಸ್‌ ಪ್ರಶ್ನೆ

ಪುಲ್ವಾಮದಲ್ಲಿನ ಘೋರ ದಾಳಿಯು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ರಾಷ್ಟ್ರೀಯ ಭದ್ರತಾ ನೀತಿಯ ವೈಫಲ್ಯದ ಫಲಿತಾಂಶ ಎಂದು ಕಾಂಗ್ರೆಸ್‌ ಹೇಳಿದೆ.

‘ಕಳೆದ 55 ತಿಂಗಳಲ್ಲಿ ಪಾಕಿಸ್ತಾನವು ಐದು ಸಾವಿರ ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಹಿಂದಿನ ಯುಪಿಎ ಸರ್ಕಾರದ 55 ತಿಂಗಳಿಗೆ ಹೋಲಿಸಿದರೆ ಇದು ಶೇ ಸಾವಿರದಷ್ಟು ಹೆಚ್ಚು. 56 ಇಂಚಿನ ಎದೆ ಈಗ ಎಲ್ಲಿ ಹೋಯಿತು. ಆಕ್ರೋಶದ ಕೆಂಪು ಕಣ್ಣುಗಳು ಎಲ್ಲಿ ಹೋದವು’ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ ಪ್ರಶ್ನಿಸಿದ್ದಾರೆ.

‘ಸಿಆರ್‌ಪಿಎಫ್‌ ವಾಹನ ಪಡೆ ಮೇಲೆ ನಡೆದ ಹೇಡಿತನದ ಕೃತ್ಯ ಭಾರಿ ನೋವು ತಂದಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

ಇದು ಉರಿಯಲ್ಲಿನ ಸೇನಾ ಶಿಬಿರದ ಮೇಲಿನ ದಾಳಿಗಿಂತಲೂ ಭೀಕರವಾಗಿದೆ. ಜಮ್ಮು ಮತ್ತು ಕಾಶ್ಮೀರವನ್ನು ಇಂತಹ ಬಿಕ್ಕಟ್ಟಿಗೆ ಕೇಂದ್ರ ಸರ್ಕಾರವೇ ತಳ್ಳಿದೆ ಎಂದು ರಣದೀಪ್‌ ಸುರ್ಜೇವಾಲಾ ಹೇಳಿದ್ದಾರೆ.

‘ದೇಶವು ಆಕ್ರೋಶ ಮತ್ತು ಸಂಕಟಗೊಂಡಿದೆ. ರಾಷ್ಟ್ರೀಯ ಭದ್ರತೆಯ ಬಗ್ಗೆ ಕೇಂದ್ರ ಸರ್ಕಾರದ ವೈಫಲ್ಯವೇ ಈ ದಾಳಿಗೆ ಕಾರಣ. ರಾಜಕೀಯ ತೀರ್ಮಾನವೇ ಇಲ್ಲದಿರುವುದು ಮತ್ತು ಭಯೋತ್ಪಾದನೆ ತಡೆಗಟ್ಟಲು ನೀತಿ ರೂಪಿಸದಿರುವುದು ಈಗಿನ ಅಪಾಯಕಾರಿ ಸ್ಥಿತಿಗೆ ದೇಶವನ್ನು ದೂಡಿದೆ’ ಎಂದು ಅವರು ಆಪಾದಿಸಿದ್ದಾರೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಗುರುವಾರ ಸಂಜೆ ಮಾಧ್ಯಮಗೋಷ್ಠಿ ನಿಗದಿ ಮಾಡಿದ್ದರು. ಆದರೆ, ಭಯೋತ್ಪಾದನಾ ದಾಳಿಯ ಕಾರಣಕ್ಕೆ ಅದನ್ನು ರದ್ದು ಮಾಡಿದ್ದಾರೆ.

ಕೇಂದ್ರದ ವಿರುದ್ಧ ಕಾಂಗ್ರೆಸ್‌ ಪಕ್ಷವು ಕಟು ವಾಗ್ದಾಳಿ ನಡೆಸಿದ್ದರೆ, ಇತರ ವಿರೋಧ ಪಕ್ಷಗಳು ಸಂಯಮ ಪಾಲಿಸಿವೆ.

ಎನ್‌ಸಿಪಿಯ ಶರದ್‌ ಪವಾರ್‌, ಟಿಎಂಸಿಯ ಮಮತಾ ಬ್ಯಾನರ್ಜಿ ಮುಂತಾದವರು ಕೃತ್ಯವನ್ನು ಖಂಡಿಸಿದ್ದಾರೆ.

***

ಪುಲ್ವಾಮಾ ದಾಳಿಯ ಸುದ್ದಿ ಕೇಳಿದ ಬಳಿಕ ಒಬ್ಬ ಸೈನಿಕನಾಗಿ ಮತ್ತು ಭಾರತೀಯನಾಗಿ ನನ್ನ ರಕ್ತ ಕುದಿಯುತ್ತಿದೆ. ಯೋಧರ ಒಂದೊಂದು ಹನಿ ರಕ್ತಕ್ಕೂ ಸೇಡು ತೀರಿಸಿಕೊಳ್ಳುತ್ತೇವೆ

ಜನರಲ್‌ (ನಿವೃತ್ತ) ವಿ.ಕೆ.ಸಿಂಗ್‌, ವಿದೇಶಾಂಗ ಖಾತೆ ರಾಜ್ಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.