ಬಂಡಿಪೋರ/ಅನಂತನಾಗ (ಜಮ್ಮು ಕಾಶ್ಮೀರ): ಜಮ್ಮು ಕಾಶ್ಮೀರದ ಅನಂತನಾಗ ಮತ್ತು ಬಂಡಿಪೋರ ಜಿಲ್ಲೆಗಳಲ್ಲಿ ಭಾನುವಾರ ತಡ ರಾತ್ರಿ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಇಬ್ಬರು ಉಗ್ರರರನ್ನು ಹೊಡೆದುರುಳಿಸಿವೆ.
ಈ ಪೈಕಿ ಬಂಡಿಪೋರದಲ್ಲಿ ಕೊಲ್ಲಲ್ಪಟ್ಟ ಉಗ್ರನು, ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ನಡೆದಿದ್ದ ನಾಗರಿಕರ ಹತ್ಯೆಯಲ್ಲಿ ಭಾಗಿಯಾಗಿದ್ದ ಎಂದು ಡಿಜಿಪಿ ದಿಲ್‌ಬಾಗ್ ಸಿಂಗ್ ತಿಳಿಸಿದರು. ಆತನನ್ನು ಇಮ್ತಿಯಾಜ್ ಅಹ್ಮದ್ ದರ್ ಎಂದು ಗುರುತಿಸಲಾಗಿದೆ. ಈತ ಲಷ್ಕರ್ ಏ ತೋಯ್ಬಾ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಅನಂತನಾಗ ಜಿಲ್ಲೆಯ ವೆರಿನಾಗ ಎಂಬಲ್ಲಿ ನಡೆದ ಕಾರ್ಯಾಚರಣೆಯ ವೇಳೆ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಗಾಯವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಜಮ್ಮು- ಕಾಶ್ಮೀರ: ನಾಗರಿಕರೇ ಈಗ ಉಗ್ರರ ಗುರಿ
ಉಗ್ರರು ಅಡಗಿರುವ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ಎರಡೂ ಜಿಲ್ಲೆಗಳಲ್ಲಿ ಭಾನುವಾರ ರಾತ್ರಿ ಕಾರ್ಯಾಚರಣೆ ಕೈಗೊಂಡಿದ್ದವು.
ಐದು ದಿನಗಳಲ್ಲಿ ಏಳು ನಾಗರಿಕರ ಹತ್ಯೆ
ಕಳೆದ ಐದು ದಿನಗಳಲ್ಲಿ ಉಗ್ರರು ಒಬ್ಬ ಶಿಕ್ಷಕ ಸೇರಿ ಏಳು ಮಂದಿ ನಾಗರಿಕರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಸರಣಿ ಹತ್ಯೆಗಳನ್ನು ನಿಲ್ಲಿಸುವುದಕ್ಕಾಗಿ ಭದ್ರತಾ ಪಡೆಗಳು ತ್ವರಿತ ಕಾರ್ಯಾಚರಣೆ ನಡೆಸುತ್ತಿವೆ.
ಪ್ರತ್ಯೇಕತಾವಾದಿಗಳ ಸಂಪರ್ಕ ಹೊಂದಿರುವ ಆರೋಪದ ಮೇಲೆ ಈವರೆಗೆ ಸುಮಾರು 400ಕ್ಕೂ ಹೆಚ್ಚು ಜನರನ್ನು ಭದ್ರತಾ ಪಡೆಗಳು ವಶಕ್ಕೆ ತೆಗೆದುಕೊಂಡಿವೆ ಮತ್ತು ಬಂಧಿಸಿವೆ. ಜಮಾತ್–ಎ–ಇಸ್ಲಾಮಿ, ತೆಹ್ರೀಕ್–ಎ–ಹುರಿಯತ್ ಸಂಘಟನೆಗಳ ಸದಸ್ಯರು, ಭೂಗತರಾಗಿ ಭಯೋತ್ಪಾದಕ ಕಾರ್ಯಾಚರಣೆ ನಡೆಸುವವರು, ಭದ್ರತಾ ಪಡೆ ಮತ್ತು ನಾಗರಿಕರ ಮೇಲೆ ಕಲ್ಲು ತೂರಾಟ ಮಾಡಿದ್ದವರು ಬಂಧಿತರಲ್ಲಿ ಸೇರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.