ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಭಾನುವಾರ ನಡೆದ ಕಾರ್ಯಾಚರಣೆಯಲ್ಲಿ ಒಬ್ಬ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಭಾನುವಾರ ಮಧ್ಯಾಹ್ನ ಬಿಲ್ಲವರ ತಹಸಿಲ್‌ನ ಕೋಗ್-ಮಂಡಲಿಯಲ್ಲಿ ಪೊಲೀಸರು ಜೈಷ್–ಇ–ಮೊಹಮ್ಮದ್ (ಜೆಇಎಂ) ಸಂಘಟನೆಗೆ ಸೇರಿದ ಉಗ್ರನನ್ನು ಎನ್‌ಕೌಂಟರ್ ಮಾಡಿದ್ದು, ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಮೂರ್ನಾಲ್ಕು ವಿದೇಶಿ ಉಗ್ರರು ಇರುವ ಬಗ್ಗೆ ಮಾಹಿತಿ ದೊರೆತ ಕಾರಣ ಗ್ರಾಮದಲ್ಲಿ ಶನಿವಾರ ಕಾರ್ಯಾಚರಣೆ ಆರಂಭಿಸಲಾಗಿದೆ. ಜಂಟಿ ಭದ್ರತಾ ತಂಡದ ಮೇಲೆ ಉಗ್ರರು ಗುಂಡು ಹಾರಿಸಿದ್ದ ಪರಿಣಾಮ ಒಬ್ಬ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದು, ಇಬ್ಬರು ಅಧಿಕಾರಿಗಳು ಗಾಯಗೊಂಡಿದ್ದಾರೆ’ ಎಂದು ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆನಂದ್ ಜೈನ್ ಹೇಳಿದರು.
‘ಮನೆಯೊಂದರಲ್ಲಿ ಉಗ್ರರು ಅಡಗಿರುವ ಮಾಹಿತಿ ಲಭ್ಯವಾಗಿದ್ದು, ಶೀಘ್ರವೇ ಅವರನ್ನು ಪತ್ತೆಹಚ್ಚುವ ಸಲುವಾಗಿ ಕಾರ್ಯಾಚರಣೆ ನಡೆಸುತ್ತಿದ್ದೇವೆ’ ಎಂದು ಜೈನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಜೌರಿಯಲ್ಲೂ ಎನ್‌ಕೌಂಟರ್:
ರಜೌರಿ ಜಿಲ್ಲೆಯ ಥನಮಂಡಿ ಪ್ರದೇಶದಲ್ಲಿಯೂ ಭಾನುವಾರ ಸಂಜೆ ಭದ್ರತಾ ಸಿಬ್ಬಂದಿ ಎನ್‌ಕೌಂಟರ್ ನಡೆಸಿದ್ದಾರೆ.
ಎನ್‌ಕೌಂಟರ್‌ನಲ್ಲಿ ಎಷ್ಟು ಉಗ್ರರು ಹತರಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
‘ಥನಮಂಡಿ ಪ್ರದೇಶದಲ್ಲಿ ಇಬ್ಬರು ಉಗ್ರರು ಅವಿತಿರುವ ಬಗ್ಗೆ ಮಾಹಿತಿ ದೊರೆತ ಕಾರಣ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿವೆ. ಈ ವೇಳೆ ಗುಂಡಿನ ಚಕಮಕಿ ನಡೆದಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.