ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಜೈಷ್–ಎ–ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಒಬ್ಬ ಉಗ್ರ ಹತನಾಗಿದ್ದಾನೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಉಗ್ರರು ಅವಿತಿರುವ ಖಚಿತ ಮಾಹಿತಿ ಮೇರೆಗೆ ದಕ್ಷಿಣ ಕಾಶ್ಮೀರದ ಅವಂತಿಪೊರಾದ ಬರಾಗಾಂ ಪ್ರದೇಶದಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿದ್ದವು. ಈ ವೇಳೆ, ಉಗ್ರನೊಬ್ಬ ಇರುವುದು ಪತ್ತೆಯಾಗಿದೆ. ಆತನಿಗೆ ಶರಣಾಗುವಂತೆ ಸೂಚಿಸಲಾಯಿತಲ್ಲದೆ, ಹಲವು ಅವಕಾಶಗಳನ್ನು ನೀಡಲಾಯಿತು. ಆದರೆ ಆತ ಭದ್ರತಾ ಸಿಬ್ಬಂದಿ ಮೇಲೆ ಗುಂಡಿನ ದಾಳಿ ಆರಂಭಿಸಿದ. ತಕ್ಷಣವೇ ಆತನನ್ನು ಪ್ರತಿ ದಾಳಿ ನಡೆಸಿ ಹತ್ಯೆ ಮಾಡಲಾಯಿತು ಎಂದು ಪೊಲೀಸ್ ವಕ್ತಾರರೊಬ್ಬರು ತಿಳಿಸಿದ್ದಾರೆ.
ಹತನಾದ ಉಗ್ರನನ್ನು ಬರಾಗಾಂ ನಿವಾಸಿ ಸಮೀರ್ ಅಹ್ಮದ್ ತಾಂತ್ರೆ ಎಂದು ಗುರುತಿಸಲಾಗಿದೆ.
ಪೊಲೀಸ್ ದಾಖಲೆಗಳ ಪ್ರಕಾರ, ತಾಂತ್ರೆ ಜೈಷ್–ಎ–ಮೊಹಮ್ಮದ್ ಉಗ್ರ ಸಂಘಟನೆ ಜತೆ ನಿಕಟ ನಂಟು ಹೊಂದಿದ್ದಲ್ಲದೆ ಹಲವು ಭಯೋತ್ಪಾದಕ ಕೃತ್ಯಗಳಲ್ಲಿ ಶಾಮೀಲಾಗಿದ್ದ.
ಆತನಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.