ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಮಂಗಳವಾರ ಕಾಶ್ಮೀರಿ ಪಂಡಿತ (ಹಿಂದೂ) ಶಿಕ್ಷಕಿಯೊಬ್ಬರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂಬಾದ ರಜನಿ ಬಲ್ಲಾ (36) ಮೃತ ಶಿಕ್ಷಕಿ ಎಂದು ಗುರುತಿಸಲಾಗಿದೆ.
ಕುಲ್ಗಾಮ್‌ನ ಗೋಪಾಲ್‌ಪೋರಾ ಪ್ರದೇಶದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ರಜನಿ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ರವಾನಿಸಲಾಯಿತು. ಆದರೆ, ಮಾರ್ಗ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೃತ್ಯವೆಸಗಿದ ಉಗ್ರರನ್ನು ಶೀಘ್ರ ಪತ್ತೆ ಹಚ್ಚಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿರುವ ಪ್ರಕರಣಗಳು ಕಾಶ್ಮೀರದಲ್ಲಿ ಮುಂದುವರಿದಿವೆ.
ಇದು ಮೇ ತಿಂಗಳಲ್ಲಿ ನಡೆದ ಕಾಶ್ಮೀರಿ ಪಂಡಿತರ ಎರಡನೇ ಹತ್ಯೆಯಾಗಿದೆ. ಮೇ 12ರಂದು ಬುದ್ಗಾಮ್ ಜಿಲ್ಲೆಯ ಚದೂರದಲ್ಲಿರುವ ಕಚೇರಿಯಲ್ಲಿ ರಾಹುಲ್ ಭಟ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಈ ತಿಂಗಳಲ್ಲಿ ಕಾಶ್ಮೀರದಲ್ಲಿ ನಡೆದ ಏಳನೇ ಉದ್ದೇಶಿತ ಹತ್ಯೆ ಇದಾಗಿದೆ. ಸಾವಿಗೀಡಾದವರು ಮೂವರು ಕರ್ತವ್ಯ ನಿರತ ಪೊಲೀಸರಾಗಿದ್ದರೆ, ನಾಲ್ವರು ನಾಗರಿಕರಾಗಿದ್ದಾರೆ.
ದಾಳಿಗೆ ಅಬ್ದುಲ್ಲಾ ಖಂಡನೆ: ಶಿಕ್ಷಕಿ ಮೇಲಿನ ದಾಳಿಯನ್ನು ಖಂಡಿಸಿರುವ ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ, ಇದೊಂದು ‘ಹೇಯ ಕೃತ್ಯ’ ಎಂದು ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.