ಜಮ್ಮು: ಇಲ್ಲಿನ ಅಖನೂರ್ ವಲಯದಲ್ಲಿ ಸೇನೆ ಹಾಗೂ ಪೊಲೀಸರು ಸೋಮವಾರ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಒಬ್ಬ ಉಗ್ರನನ್ನು ಹೊಡೆದುರುಳಿಸಲಾಗಿದೆ.
ಶಸ್ತ್ರಧಾರಿ ಉಗ್ರನೊಬ್ಬನ ಮೃತದೇಹ ದೊರಕಿದ್ದು, ಕಾರ್ಯಾಚರಣೆ ಮುಂದುವರಿದಿದೆ ಎಂದು ಸೇನೆ ತಿಳಿಸಿದೆ.
ಇದಕ್ಕೂ ಮುನ್ನ, ಸೇನಾಪಡೆಗೆ ಸೇರಿದ ಆಂಬುಲೆನ್ಸ್ ಮೇಲೆ ಉಗ್ರರು ಸೋಮವಾರ ಮುಂಜಾನೆ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಸೇನೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಯೋಧರು ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸೇನೆ ತಿಳಿಸಿದೆ.
ಆಂಬುಲೆನ್ಸ್‌ಗೆ 12 ಗುಂಡುಗಳು ತಾಗಿವೆ. ದಾಳಿ ನಡೆಸಿದ ಉಗ್ರರ ಪತ್ತೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ. ಹೆಚ್ಚಿನ ಯೋಧರನ್ನು ಸ್ಥಳದಲ್ಲಿ ನಿಯೋಜನೆಗೊಳಿಸಿದ್ದು, ದಾಳಿಕೋರ ಉಗ್ರರನ್ನು ಹೆಡೆಮುರಿ ಕಟ್ಟಲಾಗುವುದು ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಉಗ್ರರು ಭಾನುವಾರ ರಾತ್ರಿ ಅಕ್ರಮವಾಗಿ ಒಳನುಸುಳಿರುವ ಸಾಧ್ಯತೆ ಇದ್ದು, ಬಟ್ಟಲ್ ಸಮೀಪದ ದೇವಾಲಯವೊಂದರಲ್ಲಿ ಅಡಗಿ ಗುಂಡು ಹಾರಿಸಿದ್ದಾರೆ. ಮೂವರು ಉಗ್ರರು ದಾಳಿ ನಡೆಸಿರಬಹುದೆಂದು ಶಂಕಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
* ಸೇನಾ ಆಂಬುಲೆನ್ಸ್ ಮೇಲೆ ಉಗ್ರರ ದಾಳಿ * ಮೂವರು ಉಗ್ರರಿಂದ ದಾಳಿ ಶಂಕೆ * ದಾಳಿಕೋರ ಉಗ್ರರ ಪತ್ತೆಗೆ ಸೇನೆ, ಪೊಲೀಸರಿಂದ ಜಂಟಿ ಕಾರ್ಯಾಚರಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.