ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಸೇನಾವಾಹನದ ಮೇಲೆ ಸೋಮವಾರ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ನಾಲ್ವರು ಯೋಧರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.
ಮಧ್ಯಾಹ್ನ 3.30ರ ವೇಳೆಗೆ ಮಚೇಡಿ–ಕಿಂಡ್ಲಿ–ಮೊಲ್ಹಾರ್ ರಸ್ತೆಯಲ್ಲಿ ಯೋಧರು ಗಸ್ತು ತಿರುಗುತ್ತಿದ್ದಾಗ ಭಯೋತ್ಪಾದಕರು ಗ್ರೆನೇಡ್ ಮತ್ತು ಗುಂಡಿನ ದಾಳಿ ನಡೆಸಿದ್ದಾರೆ. ಒಟ್ಟು 10 ಮಂದಿ ಯೋಧರು ಗಾಯಗೊಂಡಿದ್ದರು, ಅವರಲ್ಲಿ ನಾಲ್ವರು ಮೃತಪಟ್ಟಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಈ ವೇಳೆ ಭದ್ರತಾ ಸಿಬ್ಬಂದಿ ಪ್ರತಿದಾಳಿ ನಡೆಸಿದ್ದರು. ಭಯೋತ್ಪಾದಕರು ಅರಣ್ಯದೊಳಗೆ ಅವಿತಿದ್ದು ಹೆಚ್ಚಿನ ಯೋಧರನ್ನು ನಿಯೋಜಿಸಿಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿ ನಡೆದ ಪ್ರದೇಶದಲ್ಲಿ ಇತ್ತೀಚೆಗೆ ಭಯೋತ್ಪಾದನೆ ಚಟುವಟಿಕೆಗಳು ಹೆಚ್ಚಾಗಿದ್ದ ಕಾರಣ ಸೇನೆಯು ಗಸ್ತು ತಿರುಗುತ್ತಿತ್ತು.
ಕಳೆದ ನಾಲ್ಕು ವಾರಗಳಲ್ಲಿ ಕಥುವಾದಲ್ಲಿ ನಡೆದ ಎರಡನೇ ಭಯೋತ್ಪಾದಕ ದಾಳಿ ಇದಾಗಿದ್ದು, ಜೂನ್ 12 ಮತ್ತು 13ರಂದು ಸೇನಾ ಕಾರ್ಯಾಚರಣೆ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಸಿಆರ್‌ಪಿಎಫ್ ಯೋಧ ಮತ್ತು ಇಬ್ಬರು ಭಯೋತ್ಪಾದಕರು ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.