ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಯೋಧರ ಮೇಲೆ ಉಗ್ರರು ನಡೆಸಿದ ದಾಳಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಲಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು, ಈ ಘಟನೆ ಭಾರತದ ಜನರ ರಕ್ತ ಕುದಿಯುವಂತೆ ಮಾಡಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ದೆಹಲಿಯಲ್ಲಿ ವಂದೇ ಭಾರತ ಎಕ್ಸ್‌ಪ್ರೆಸ್ ರೈಲಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಮೋದಿ, ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ಈ ಹೇಯ ಕೃತ್ಯ ಎಸಗಿದ್ದಾರೆ. ಇದಕ್ಕೆ ಉಗ್ರರು ಬೆಲೆ ತೆರಲಿದ್ದಾರೆ. ಅಮಾನವೀಯವಾಗಿ ವರ್ತಿಸಿದ ಭಯೋತ್ಪಾದಕರಿಗೆ ಭಾರತ ತಕ್ಕ ಉತ್ತರ ನೀಡಲಿದೆ ಎಂದು ಭರವಸೆ ನೀಡಿದ್ದಾರೆ.
ಉಗ್ರರು ಬಹು ದೊಡ್ಡ ತಪ್ಪೆಸಗಿದ್ದಾರೆ
ಉಗ್ರರು ದಾಳಿ ನಡೆಸುವ ಮೂಲಕ ಬಹು ದೊಡ್ಡ ತಪ್ಪು ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ದೊಡ್ಡ ಬೆಲೆಯನ್ನೇ ತೆರಲಿದ್ದಾರೆ ಎಂದು ಮೋದಿ ಹೇಳಿದರು.
ಹುತಾತ್ಮ ಯೋಧರಿಗೆ ಹೃದಯಪೂರ್ವಕ ಶ್ರದ್ಧಾಂಜಲಿ ಸಲ್ಲಿಸುವೆ. ದುಃಖ ನನ್ನನ್ನು ಸೇರಿ ಇಡೀ ದೇಶ ಅವರ ಕುಟುಂಬದ ಜತೆ ಇರಲಿದೆ. ಇಡೀ ದೇಶ ಆಕ್ರೋಶ ವ್ಯಕ್ತಪಡಿಸಿದೆ. ದೇಶದ ರಕ್ಷಣೆ ನೀಡುವ ವಿಷಯದಲ್ಲಿ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ಸೇನೆಯ ಮೇಲೆ ಸಂಪೂರ್ಣ ಭರವಸೆ ಇದೆ. ದೇಶಭಕ್ತಿಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದರು.
ಭಯೋತ್ಪಾದನೆ ವಿರುದ್ಧ ಹೋರಾಡಲು ಇಡೀ ವಿಶ್ವವೇ ಭಾರತಕ್ಕೆ ಬೆಂಬಲ ಸೂಚಿಸಿದೆ. ಯಾವ ಶಕ್ತಿಯೂ ಭಾರತದ ಶಾಂತಿ, ಪ್ರಗತಿ ಮತ್ತು ಸ್ಥಿರತೆಯ ವಿರುದ್ಧ ಜಯಿಸಲಾರವು ಎಂದು ಮೋದಿ ಎಚ್ಚರಿಸಿದ್ದಾರೆ.
ಉಗ್ರರ ಈ ಕೃತ್ಯವನ್ನು ಖಂಡಿಸಿ ಭಾರತಕ್ಕೆ ಬೆಂಬಲವಾಗಿ ನಿಂತ ನೆರೆ ರಾಷ್ಟ್ರಗಳಿಗೆ ಅಭಿನಂದಿಸಿದ ಮೋದಿ, ಎಲ್ಲಾ ರಾಷ್ಟ್ರಗಳು ಜತೆಗೂಡಿ ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸಿದ್ದೇ ಆದಲ್ಲಿಭಯೋತ್ಪಾದನೆಯನ್ನು ಕಿತ್ತೊಗೆಯಬಹುದು. ಯೋಧರು ರಾಷ್ಟ್ರಕ್ಕಾಗಿ ತಮ್ಮ ಜೀವವನ್ನೇ ಬಲಿದಾನ ಮಾಡಿದ್ದಾರೆ. ಉಗ್ರರನ್ನು ಶಿಕ್ಷಿಸುವಲ್ಲಿ ಪ್ರತಿಯೊಂದು ರಾಷ್ಟ್ರವು ಉತ್ತಮ ನಿರ್ಧಾರ ಕೈಗೊಳ್ಳಲಿದೆ ಎಂಬ ನಂಬಿಕೆ ನಮಗಿದೆ ಎಂದು ಮೋದಿಹೇಳಿದರು.
130 ಕೋಟಿ ಭಾರತೀಯರು ಒಟ್ಟಾಗಿದ್ದಾರೆ. ಮಾನವತಾವಾದಿ ಶಕ್ತಿ ಒಗ್ಗೂಡಿದರೆ ಆಗಂತುಕರು ಏನನ್ನೂ ಮಾಡಲಾಗದು. ಅವರನ್ನು ಮಟ್ಟ ಹಾಕುತ್ತೇವೆ.
ಪುಲ್ವಾಮ ಘಟನೆಯಿಂದ ನೋವಾಗಿದೆ, ವೀರ ಯೋಧರು ಪ್ರಾಣ ತ್ಯಾಗ ಮಾಡಿದ್ದಾರೆ. ದೇಶದ ಸುರಕ್ಷತೆ, ದೇಶದ ಸಮೃದ್ಧಿಗೆ ಶ್ರಮಿಸುವ ಯೋಧರಿಗೆ ಸದಾ ನಮನಗಳು ಎಂದರು.
ಇದನ್ನೂ ಓದಿ: ಪುಲ್ವಾಮ ದಾಳಿಯ ಮಾಸ್ಟರ್ ಮೈಂಡ್ ಅಬ್ದುಲ್ ರಶೀದ್ ಘಾಝಿ
ಸಮಯ, ಸ್ಥಳ, ಎದುರಾಳಿಯ ಪ್ರತಿಕ್ರಿಯೆ ಅನುಸರಿಸಿ ಉಗ್ರರ ಮೇಲೆ ಪ್ರತಿದಾಳಿ ನಡೆಸಲು ಈಗಾಗಲೇ ಭದ್ರತೆ ಪಡೆಗೆ ಅನುಮತಿ ನೀಡಲಾಗಿದೆ. ಇದು ಭಾರತದ ಹೊಸ ಒಪ್ಪಂದ ಮತ್ತು ನಿಯಮವಾಗಿದೆ ಎಂದರು.
* ಇವನ್ನೂ ಒದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.