ನವದೆಹಲಿ: ಶಿಕ್ಷಕರ ರಾಷ್ಟ್ರೀಯ ಅರ್ಹತಾ ಪರೀಕ್ಷೆಯ (ಟಿಇಟಿ) ಪ್ರಮಾಣಪತ್ರದಮಾನ್ಯತೆಯ ಅವಧಿಯನ್ನು 7 ವರ್ಷದಿಂದಜೀವಿತಾವಧಿಯವರೆಗೆ ವಿಸ್ತರಿಸಿ ಕೇಂದ್ರ ಶಿಕ್ಷಣ ಇಲಾಖೆ ಇಂದು ಆದೇಶ ಹೊರಡಿಸಿದೆ.
ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್ ಅವರು ಈ ವಿಷಯವನ್ನು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಉದ್ಯೋಗವಕಾಶಗಳನ್ನು ಹೆಚ್ಚಿಸಲು ಈ ಕ್ರಮ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.
‘ಈ ನಿಯಮ 2011 ರಿಂದಲೇ ಪೂರ್ವಾನ್ವಯವಾಗಲಿದ್ದು, 2011 ಕ್ಕೆ ಯಾರು ಟಿಇಟಿ ಮಾನ್ಯತೆಯನ್ನು ಕಳೆದುಕೊಂಡಿದ್ದರೋ ಅಂತವರೂ ಸಹ ಇನ್ನು ಮುಂದೆಶಿಕ್ಷಕ ಕೆಲಸಕ್ಕೆ ಅರ್ಹರಾಗುತ್ತಾರೆ‘ ಎಂದು ಸಚಿವರು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಕೇಂದ್ರ ಶಿಕ್ಷಣ ಇಲಾಖೆ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದ್ದು, ಟಿಇಟಿ ಮಾನ್ಯತೆಯ ಪ್ರಮಾಣಪತ್ರವನ್ನು ಹೊಸದಾಗಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.
ಶಿಕ್ಷಕರ ರಾಷ್ಟ್ರೀಯ ಅರ್ಹತಾ ಪರೀಕ್ಷೆಯು, ದೇಶದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಿಗೆ ಶಿಕ್ಷಕರಾಗಲು ಕನಿಷ್ಠ ಮಟ್ಟದ ಅಹರ್ತಾ ಪರೀಕ್ಷೆಯಾಗಿದೆ. ಸಿಬಿಎಸ್‌ಇ ರಾಜ್ಯಗಳ ಮೂಲಕ ಈ ಪರೀಕ್ಷೆ ನಡೆಸಿ ಅರ್ಹತಾ ಪ್ರಮಾಣಪತ್ರಗಳನ್ನು ವಿತರಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.