ಜೈಪುರ: ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಬಗ್ಗೆ ಇರುವ ಪಾಠವೊಂದನ್ನು ಶಾಲಾ ಪಠ್ಯದಲ್ಲಿ ಅಳವಡಿಸಲು ರಾಜಸ್ತಾನ ಸರ್ಕಾರ ತೀರ್ಮಾನಿಸಿದೆ.
ರಾಜಸ್ತಾನದ ಶಿಕ್ಷಣ ಸಚಿವ ಗೋವಿಂದ್ ಸಿಂಗ್ ದೊಸ್ತಾರ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.ಸಚಿವರ ಪ್ರಕಾರ ಅಭಿನಂದನ್ ಅವರು ಜೋಧಪುರ್‌ನಲ್ಲಿ ಶಿಕ್ಷಣ ಪಡೆದಿದ್ದರು. ಹಾಗಾಗಿ ಅವರ ಜೀವನದ ಕತೆಯನ್ನುಪಠ್ಯಪುಸ್ತಕದಲ್ಲಿ ಅಳವಡಿಸಲಾಗುತ್ತದೆ.
ಕಾಶ್ಮೀರದ ಗಡಿನಿಯಂತ್ರಣ ರೇಖೆಯಲ್ಲಿ ಫೆ.27ರಂದುಪಾಕ್ ವಾಯುಪಡೆಯ ಯುದ್ಧವಿಮಾನಗಳೊಡನೆ ನಡೆದಿದ್ದ ಹೋರಾಟದಲ್ಲಿ ಅಭಿನಂದನ್ ತಮ್ಮ ಮಿಗ್–21 ಯುದ್ಧವಿಮಾನದಿಂದ ಪಾಕಿಸ್ತಾನದ ಎಫ್–16 ಯುದ್ಧವಿಮಾನವನ್ನು ಹೊಡೆದುರುಳಿಸಿದ್ದರು. ಇದೇ ಸಂದರ್ಭ ಶತ್ರುದೇಶದ ಕ್ಷಿಪಣಿಯೊಂದು ತಾಗಿ ಅಭಿನಂದನ್ ಅವರಿದ್ದ ಮಿಗ್ ವಿಮಾನ ಪತನಗೊಂಡಿತ್ತು. ಪ್ಯಾರಾಚೂಟ್ ಸಹಾಯದಿಂದ ವಿಮಾನದಿಂದ ಹೊರಜಿಗಿದ ಅಭಿನಂದನ್ ನೆಲ ಮುಟ್ಟಿದ ಸ್ಥಳ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಸೇರಿತ್ತು. ಸ್ಥಳೀಯರಿಂದ ತಪ್ಪಿಸಿಕೊಳ್ಳುವ ಯತ್ನ ವಿಫಲವಾದಾಗ ತಮ್ಮ ಬಳಿ ಇದ್ದ ದಾಖಲೆಗಳನ್ನು ಅಭಿನಂದನ್ ನಾಶಪಡಿಸಿದ್ದರು.
ಸ್ಥಳೀಯರಿಂದ ಹಲ್ಲೆಗೊಳಗಾದ ಅಭಿನಂದನ್ ಅವರನ್ನು ನಂತರ ಪಾಕ್ ಸೇನೆ ತನ್ನ ವಶಕ್ಕೆ ತೆಗೆದುಕೊಂಡಿತ್ತು. ಅಭಿನಂದನ್ ಮೇಲೆ ಸ್ಥಳೀಯರು ಹಲ್ಲೆ ನಡೆಸುವ, ಅವರು ತನ್ನ ವಶದಲ್ಲಿರುವ ವಿಡಿಯೊಗಳನ್ನು ಪಾಕ್ ಫೆ.28ಕ್ಕೆಬಿಡುಗಡೆ ಮಾಡಿತ್ತು. ಜಿನಿವಾ ಒಪ್ಪಂದಕ್ಕೆ ಬದ್ಧವಾಗಿರಬೇಕಾದ ಅನಿವಾರ್ಯತೆ ಮತ್ತು ಅಂತರರಾಷ್ಟ್ರೀಯ ಸಮುದಾಯದ ಒತ್ತಡಕ್ಕೆ ಮಣಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗುರುವಾರ ಸಂಜೆ ಪಾಕ್ ಸಂಸತ್ತಿನಲ್ಲಿ ‘ಅಭಿನಂದನ್ ಅವರನ್ನು ಶಾಂತಿಯ ಸಂಕೇತವಾಗಿ ಬಿಡುಗಡೆ ಮಾಡಲಾಗುವುದು’ ಎಂದು ಘೋಷಿಸಿದ್ದರು.
ಭಾರತ ಸರ್ಕಾರವು ಅಭಿನಂದನ್ ಅವರನ್ನು ವಾಯುಮಾರ್ಗದಲ್ಲಿ ಕರೆತರಲು ಉದ್ದೇಶಿಸಿತ್ತು. ಆದರೆ ಪಾಕ್ ಸರ್ಕಾರ ಸ್ಪಂದಿಸದ ಕಾರಣ ಭೂಮಾರ್ಗದಲ್ಲಿಯೇ, ವಾಘಾ–ಅಟ್ಟಾರಿ ಗಡಿಯ ಮೂಲಕ ಅಭಿನಂದನ್ ಭಾರತ ಪ್ರವೇಶಿಸಿದರು. ನೆರೆದಿದ್ದ ಸಾವಿರಾರು ಜನರು ದೇಶದ ಹೆಮ್ಮೆಯ ವೀರಯೋಧನನ್ನು ತೆರೆದ ಕರದಿಂದ ಸ್ವಾಗತಿಸಿದರು. ಬಿಡುಗಡೆ ವಿರೋಧಿಸಿ ಪಾಕಿಸ್ತಾನದ ನ್ಯಾಯಾಲಯದಲ್ಲಿ ಅರ್ಜಿಯೊಂದು ದಾಖಲಾದ ಕಾರಣ ಅಭಿನಂದನ್ ಭಾರತಕ್ಕೆ ಬರುವುದು ತಡವಾಯಿತು.
ಪಾಕ್ ವಶದಲ್ಲಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಮಾರ್ಚ್ 1ರರಾತ್ರಿ 9.20ಕ್ಕೆ ಪಂಜಾಬ್‌ನ ಅಟಾರಿ ಗಡಿಯ ಮೂಲಕ ಭಾರತದ ನೆಲದ ಮೇಲೆ ಕಾಲಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.