ಹೈದರಾಬಾದ್: ಸೆಬಿ ಮುಖ್ಯಸ್ಥೆ ಮಾಧವಿ ಬುಚ್ ಅವರ ರಾಜೀನಾಮೆ ಮತ್ತು ಅದಾನಿ ವಿವಾದದ ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆಗೆ ಒತ್ತಾಯಿಸಿ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ, ಪಕ್ಷದ ಸಚಿವರು ಮತ್ತು ಶಾಸಕರು ಧರಣಿ ನಡೆಸಿದ್ದಾರೆ.
'ಸತ್ಯ ಮೇಲುಗೈ ಸಾಧಿಸಲಿದೆ’ ಎಂಬ ಘೋಷಣಾ ಫಲಕಗಳನ್ನು ಹಿಡಿದು ಗನ್ ಪಾರ್ಕ್‌ನಿಂದ ಜಾರಿ ನಿರ್ದೇಶನಾಲಯ (ಇ.ಡಿ) ಕಚೇರಿವರೆಗೆ ರ‍್ಯಾಲಿ ನಡೆಸಿದ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಮುಖಂಡರು ಇ.ಡಿ ಕಚೇರಿ ಆವರಣದ ಎದುರು ಧರಣಿ ನಡೆಸಿದರು.
‘ಸೆಬಿ ಅಧ್ಯಕ್ಷರ ರಾಜೀನಾಮೆ ಮತ್ತು ಅದಾನಿಯ ಬಹುದೊಡ್ಡ ಹಗರಣದ ತನಿಖೆಗಾಗಿ ಜಂಟಿ ಸಂಸದೀಯ ಸಮಿತಿಯನ್ನು ರಚಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ’ ಎಂದು ಕಾಂಗ್ರೆಸ್ ಮುಖಂಡರು ಹೇಳಿದರು.
ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಸೇರಿದಂತೆ ಪಕ್ಷದ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವಾಣಿಜ್ಯ ಕ್ಷೇತ್ರದಲ್ಲಿ ಸದ್ದು ಮಾಡಿರುವ ಅದಾನಿ ಷೇರು ಹಗರಣದಲ್ಲಿ ಮಾಧವಿ ಹಾಗೂ ಧವಲ್ ಭಾಗಿಯಾಗಿದ್ದಾರೆ. ಉದ್ಯಮಿ ಗೌತಮ್ ಅದಾನಿ ಸಮೂಹದ ಸಾಗರೋತ್ತರ ಹೂಡಿಕೆಯಲ್ಲಿ ಬುಚ್ ದಂಪತಿಯ ಪಾಲುದಾರಿಕೆ ಇದೆ ಎಂದು ಹಿಂಡೆನ್‌ಬರ್ಗ್ ಗಂಭೀರವಾದ ಆರೋಪ ಮಾಡಿದೆ. ಈ ಬೆನ್ನಲ್ಲೇ ಕಾಂಗ್ರೆಸ್, ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಹಿಂಡೆನ್‌ಬರ್ಗ್ ಆರೋಪಗಳು ಆಧಾರರಹಿತವಾಗಿವೆ, ತಮ್ಮ ಹಣಕಾಸು ವ್ಯವಹಾರಗಳು ತೆರೆದ ಪುಸ್ತಕವಿದ್ದಂತೆ ಎಂದು ಬುಚ್ ದಂಪತಿ ಪ್ರತಿಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.