ಥಾಣೆ: ಕೋವಿಡ್ ವೈರಾಣುವಿನ ಸಂಕಷ್ಟದಿಂದ ಹೊರಬರಲು ಹರಸಾಹಸ ಪಡುತ್ತಿರುವ ನಡುವೆ ಅತ್ಯಂತ ಬೇಜವಾಬ್ದಾರಿ ನಡೆಗಳು ಸವಾಲಾಗಿ ಪರಿಣಮಿಸಿವೆ. ಒಂದೇ ದಿನದಲ್ಲಿ ಮಹಿಳೆಯೊಬ್ಬರಿಗೆ ಮೂರು ಡೋಸ್ ಕೋವಿಡ್ ಲಸಿಕೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಥಾಣೆಯ ಆನಂದನಗರದ ಕೋವಿಡ್ ಲಸಿಕೆ ಕೇಂದ್ರಕ್ಕೆ ಜೂನ್ 25ರಂದು ಭೇಟಿ ನೀಡಿದ್ದ 28 ವರ್ಷದ ರೂಪಾಲಿ ಸಾಲಿ ಎಂಬ ಮಹಿಳೆಗೆ ಒಂದರ ಹಿಂದೆ ಒಂದರಂತೆ ಮೂರು ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ವೈದ್ಯ ಸಿಬ್ಬಂದಿಯ ಹಠಾತ್ ವರ್ತನೆಯಿಂದ ಮಹಿಳೆ ಕಂಗಾಲಾಗಿದ್ದಾರೆ.
ಮೂರು ಚುಚ್ಚುಮದ್ದು ಪಡೆದಿದ್ದರಿಂದ ದಿಗ್ಭ್ರಾಂತರಾಗಿದ್ದ ಮಹಿಳೆ ಭಯಗೊಂಡು ಗಂಡನಿಗೆ ವಿಷಯ ತಿಳಿಸಿದಾಗ ವೈದ್ಯ ಸಿಬ್ಬಂದಿಯ ಅವಾಂತರ ಬೆಳಕಿಗೆ ಬಂದಿದ್ದು, ಅಧಿಕಾರಿಗಳಿಗೆ ದೂರು ನೀಡಲಾಗಿದೆ.
'ಮಹಿಳೆಗೆ ಕೋವಿಡ್ ಲಸಿಕೆಯ ಪ್ರಕ್ರಿಯೆ ಬಗ್ಗೆ ತಿಳಿದಿರಲಿಲ್ಲ. ಹಾಗಾಗಿ ಏಕಕಾಲಕ್ಕೆ ಒಂದರ ಹಿಂದೆ ಒಂದರಂತೆ ಲಸಿಕೆ ನೀಡುವಾಗ ತಡೆಯುವ ಪ್ರಯತ್ನ ನಡೆಸಿಲ್ಲ. ಆಕೆಯನ್ನು ಹಿರಿಯ ವೈದ್ಯರು ಪರೀಕ್ಷೆ ನಡೆಸಿದ್ದಾರೆ. ಮಹಿಳೆಗೆ ಸದ್ಯ ಯಾವುದೇ ತೊಂದರೆ ಇಲ್ಲ. ಆರಾಮಾಗಿದ್ದಾರೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಆರಂಭದಲ್ಲಿ ಈ ಘಟನೆ ಬಗ್ಗೆ ವೈದ್ಯಕೀಯ ಅಧಿಕಾರಿ ಡಾ. ವೈಜಂತಿ ದೇವ್ಗಿಕರ್ ಅಲ್ಲಗಳೆದಿದ್ದರು. ನಂತರ ಥಾಣೆಯ ಮೇಯರ್ ನರೇಶ್ ಮಹಸ್ಕೆ ಮಹಿಳೆಗೆ ಮೂರು ಡೋಸ್ ನೀಡಿರುವ ಬಗ್ಗೆ ದೃಢ ಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.