ನವದೆಹಲಿ: ಸಿಪಿಎಂ ನೇತೃತ್ವದ ಎಲ್‌ಡಿಎಫ್ ಬಗ್ಗೆ ವಿಶ್ವಾಸವಿಟ್ಟ ಕೇರಳ ಮತದಾರರಿಗೆ ಧನ್ಯವಾದಗಳು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ತಿಳಿಸಿದ್ದಾರೆ.
ಜನರು ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪಕ್ಷವು ನಿರಂತರ ಹೋರಾಟ ನಡೆಸಲಿದೆ ಎಂದು ಅವರು ತಿಳಿಸಿದ್ದಾರೆ.
ಕೋವಿಡ್ ಸಾಂಕ್ರಾಮಿಕ ಕಾಯಿಲೆಯನ್ನು ನಿಯಂತ್ರಿಸುವ ಸಂದರ್ಭದಲ್ಲಿ ಎದುರಾದ ಹಲವು ಸವಾಲುಗಳನ್ನು ಎಲ್‌ಡಿಎಫ್ ಸರ್ಕಾರ ನಿವಾರಿಸಿತ್ತು. ಜತೆಗೆ, ಸಾಂಕ್ರಾಮಿಕ ಕಾಯಿಲೆಯನ್ನು ಯಾವ ರೀತಿ ಎದುರಿಸಬೇಕು ಎನ್ನುವುದನ್ನು ವಿಶ್ವಕ್ಕೆ ತೋರಿಸಿಕೊಟ್ಟಿತು ಎಂದು ಅವರು ಹೇಳಿದ್ದಾರೆ.
ದೇಶದಲ್ಲಿ ಜನರ ಬದುಕು ಸದ್ಯ ಸಂಕಷ್ಟದಲ್ಲಿದೆ. ಜತೆಗೆ, ಸಂವಿಧಾನ, ಜಾತ್ಯತೀತತೆ ರಕ್ಷಣೆಯ ಅಗತ್ಯವಾಗಿದೆ. ಸಿಪಿಎಂ ನೇತೃತ್ವದ ಎಲ್‌ಡಿಎಫ್ ಈ ವಿಷಯಗಳಲ್ಲಿ ತನ್ನ ಹೋರಾಟ ರೂಪಿಸುತ್ತದೆ. ಇಂತಹ ಮಹತ್ವದ ವಿಷಯಗಳಲ್ಲಿ ಕೇರಳದ ಜನತೆ ಸದಾ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಕೇರಳದಲ್ಲಿ ಎಲ್‌ಡಿಎಫ್ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. 140 ಸದಸ್ಯರ ವಿಧಾನಸಭೆಯಲ್ಲಿ ಎಲ್‌ಎಡಿಎಫ್ 88 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ 50 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.