ADVERTISEMENT

‘ಆಬ್ ಕಿ ಬಾರ್ ಟ್ರಂಪ್ ಸರ್ಕಾರ್’ ತಪ್ಪಾಗಿ ಬಿಂಬಿಸಬೇಡಿ: ಎಸ್‌.ಜೈಶಂಕರ್ ಸಮರ್ಥನೆ

ರಾಹುಲ್ ಗಾಂಧಿ ತಿರುಗೇಟು

ಏಜೆನ್ಸೀಸ್
Published 1 ಅಕ್ಟೋಬರ್ 2019, 6:38 IST
Last Updated 1 ಅಕ್ಟೋಬರ್ 2019, 6:38 IST
ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ
ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ   

ನವದೆಹಲಿ:‘ಹೌಡಿ ಮೋದಿ’ಕಾರ್ಯಕ್ರಮದ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ‘ಆಬ್‌ ಕಿ ಬಾರ್ ಟ್ರಂಪ್ ಸರ್ಕಾರ್’ ಎಂದು ಘೋಷಣೆ ಮಾಡಿದ್ದನ್ನು ತಪ್ಪಾಗಿ ಬಿಂಬಿಸಬಾರದು ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ. ಇದಕ್ಕೆತಿರುಗೇಟು ನೀಡಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿಯವರಿಗೆ ವಿದೇಶಾಂಗ ನೀತಿ ಕಲಿಸಿ ಎಂದು ಟ್ವೀಟ್ ಮಾಡಿದ್ದಾರೆ.

ಮೂರು ದಿನಗಳ ವಾಷಿಂಗ್ಟನ್ ಡಿಸಿ ಪ್ರವಾಸದಲ್ಲಿರುವ ಜೈಶಂಕರ್ ಅವರು ಮೋದಿ ಹೇಳಿಕೆ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ‘2020ರ ಅಧ್ಯಕ್ಷೀಯ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಖಂಡಿತವಾಗಿಯೂ ಮೋದಿ ಆ ರೀತಿ ಹೇಳಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಅಮೆರಿಕದ ರಾಜಕೀಯದಲ್ಲಿ ಭಾರತ ಎಂದಿಗೂ ತಟಸ್ಥ ನಿಲುವನ್ನೇ ಅನುಸರಿಸಲಿದೆ. ಕಳೆದ ಬಾರಿಯ ಅಧ್ಯಕ್ಷೀಯ ಚುನಾವಣೆ ಪ್ರಚಾರದ ವೇಳೆ ತಮ್ಮನ್ನು ಬೆಂಬಲಿಸುವಂತೆ ಡೊನಾಲ್ಡ್ ಟ್ರಂಪ್ ಅವರು ಭಾರತೀಯ ಸಮುದಾಯವನ್ನು ಮನವಿ ಮಾಡಿದ್ದರು ಎಂಬುದನ್ನು ಉಲ್ಲೇಖಿಸುವ ಸಂದರ್ಭ ಮೋದಿಯವರು ‘ಆಬ್‌ ಕಿ ಬಾರ್ ಟ್ರಂಪ್ ಸರ್ಕಾರ್’ ಎಂದು ಹೇಳಿದ್ದಾರಷ್ಟೆ’ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.

ಸೂಕ್ಷ್ಮವಾಗಿ ಗಮನಿಸಿ, ಟ್ರಂಪ್ ಅವರು ಕಳೆದ ಬಾರಿಯ ಚುನಾವಣಾ ಪ್ರಚಾರದ ವೇಳೆ ಭಾರತೀಯ ಸಮುದಾಯಕ್ಕೆ ಮಾಡಿದ ಮನವಿಯನ್ನು ಮೋದಿ ಆ ರೀತಿ ಉಲ್ಲೇಖಿಸಿದ್ದಾರೆ ಎಂದು ಜೈಶಂಕರ್ ಹೇಳಿದ್ದಾರೆ.

‘ವಿದೇಶಾಂಗ ನೀತಿ ಕಲಿಸಿ’:ಜೈಶಂಕರ್ ಸಮರ್ಥನೆಗೆ ರಾಹುಲ್ ಗಾಂಧಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ‘ಮೋದಿಯವರ ಅಸಮರ್ಥತೆಯನ್ನು ಮರೆಮಾಚಿರುವುದಕ್ಕೆ ಧನ್ಯವಾದಗಳು. ಅವರ ಅನುಮೋದನೆಯು ಭಾರತದ ಪ್ರಜಾಪ್ರಭುತ್ವವಾದಿಗಳಿಗೆ ಗಂಭೀರ ಸಮಸ್ಯೆ ಉಂಟುಮಾಡಿತು. ನಿಮ್ಮ ಮಧ್ಯಸ್ಥಿಕೆಯಿಂದ ಅದು ಸರಿಯಾಗಬಹುದು ಎಂದು ಭಾವಿಸಿದ್ದೇನೆ. ಹೇಗೂ ನೀವು ಆ ಕ್ಷೇತ್ರದಲ್ಲಿರುವುದರಿಂದ ನಮ್ಮ ರಾಜತಾಂತ್ರಿಕತೆ ಬಗ್ಗೆ ಅವರಿಗೆ (ಮೋದಿ) ಸ್ವಲ್ಪ ತಿಳಿಹೇಳಿ’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.