ನವದೆಹಲಿ: 2024ರ ಜ.22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆಯಲಿರುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕೆ ಧನ್ಯವಾದ ಎಂದು ಕಾಂಗ್ರೆಸ್ ಪಕ್ಷ ಗುರುವಾರ ಹೇಳಿದೆ. ಆದರೆ ಪಕ್ಷದ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗುವರೇ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ.
‘ಪಕ್ಷದ ನಿಲುವು ಏನೆಂದು ನಿಮಗೆ ತಿಳಿಯಲಿದೆ. ಭಾಗವಹಿಸುವ ಬಗ್ಗೆ ಜ. 22ರಂದು ನಿಮಗೆ ಗೊತ್ತಾಗಲಿದೆ. ಅವರು ನಮಗೆ ಆಹ್ವಾನ ನೀಡಿದ್ದಾರೆ. ಆಹ್ವಾನಕ್ಕಾಗಿ ನಾವು ಆಭಾರಿಯಾಗಿದ್ದೇವೆ. ಕಾದು ನೋಡೋಣ’ ಎಂದು ಕಾಂಗ್ರೆಸ್ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆಯೇ ಎನ್ನುವ ಪತ್ರಕರ್ತರ ಪ್ರಶ್ನೆಗೆ ಪಕ್ಷದ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರಿಗೆ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಆಹ್ವಾನ ಪತ್ರಿಕೆ ಕಳುಹಿಸಿದೆ.
ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ ಹಾಗೂ ಎಚ್.ಡಿ ದೇವೇಗೌಡ ಅವರಿಗೂ ಆಹ್ವಾನ ನೀಡಲಾಗಿದೆ. ಟ್ರಸ್ಟ್‌ಗೆ ಸಂಬಂಧಿಸಿದ ನಿಯೋಗಗಳ ಮೂಲಕ ಇವರೆಲ್ಲರಿಗೂ ಆಹ್ವಾನ ಪತ್ರಿಕೆ ತಲುಪಿಸಲಾಗಿದೆ.
ಭವಿಷ್ಯದಲ್ಲಿ ಇನ್ನಷ್ಟು ಪ್ರತಿಪಕ್ಷಗಳ ನಾಯಕರಿಗೆ ಆಹ್ವಾನ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.