ನವದೆಹಲಿ (ಪಿಟಿಐ): ಅಮಾನತ್ತಿನಲ್ಲಿರುವ ರಾಜ್ಯಸಭೆಯ 12 ಸಂಸದರಿಗೆ ಬೆಂಬಲ ಸೂಚಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಸಂಸದ್ ಟಿವಿಯ ಕಾರ್ಯಕ್ರಮವೊಂದರ ನಿರೂಪಣೆ ಮಾಡುವುದನ್ನು ನಿರಾಕರಿಸಿದ್ದಾರೆ.
ಸಂಸದರ ಅಮಾನತು ಆದೇಶವನ್ನು ಹಿಂಪಡೆಯುವವರೆಗೆ ಮತ್ತು ರಾಜಕೀಯ ಪಕ್ಷಗಳ ನಡುವಿನ ಪರ, ವಿರೋಧ ಚರ್ಚೆಗಳನ್ನು ಸಂಸತ್‌ನಲ್ಲಿ ಪುನಃಸ್ಥಾಪಿಸುವವರೆಗೆ ಸಂಸದ್ ಟಿವಿಯಲ್ಲಿ ‘ಚರ್ಚೆ ಕಾರ್ಯಕ್ರಮವನ್ನು’ ನಿರ್ವಹಿಸುವುದಿಲ್ಲ ಎಂದು ತರೂರ್ ಸೋಮವಾರ ಹೇಳಿದ್ದಾರೆ.
‘ಟು ದ ಪಾಯಿಂಟ್’ ಎಂಬ ಚರ್ಚೆ ಕಾರ್ಯಕ್ರಮವನ್ನು ಅವರು ನಿರ್ವಹಿಸುತ್ತಿದ್ದರು.
‘ಪ್ರಜಾಪ್ರಭುತ್ವದ ಉತ್ತಮ ಪರಂಪರೆಗಳಲ್ಲಿ ಭಾರತದ ಸಂಸತ್ತು ಕೂಡ ಒಂದಾಗಿರುವ ಕಾರಣ ಕಾರ್ಯಕ್ರಮವನ್ನು ನಿರ್ವಹಿಸಲು ಸಂಸದ್ ಟಿವಿ ನೀಡಿದ ಆಹ್ವಾನವನ್ನು ನಾನು ಸ್ವೀಕರಿಸಿದ್ದೆ.ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಸಂಸತ್ ಸದಸ್ಯರಾಗಿ ಸಂಸದೀಯ ಸಂಸ್ಥೆಗಳಲ್ಲಿ ನಾವು ತೊಡಗಿಸಿಕೊಳ್ಳುವುದನ್ನು ಅದು ತಡೆದಿರಲಿಲ್ಲ ಎಂಬುದನ್ನೂ ನಾನು ಒತ್ತಿ ಹೇಳುತ್ತೇನೆ. ಕಳೆದ ಅಧಿವೇಶನದಲ್ಲಿ ರಾಜ್ಯಸಭೆಯ 12 ಸದಸ್ಯರನ್ನು ದೀರ್ಘಕಾಲದವರೆಗೆ ಅಮಾನತ್ತಿನಲ್ಲಿಟ್ಟಿರುವುದು ಸರಿಯಲ್ಲ’ ಎಂದು ಅವರು ಹೇಳಿದ್ದಾರೆ.
ಸಂಸದರ ಅಮಾನತ್ತಿನ ಹಿನ್ನೆಲೆಯಲ್ಲಿ ಸಂಸದ್ ಟಿವಿಯ ‘ಮೇರಿ ಕಹಾನಿ’ ಕಾರ್ಯಕ್ರಮವನ್ನು ನಿರ್ವಹಿಸುವುದಿಲ್ಲ ಎಂದು ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಹೇಳಿಕೆ ನೀಡಿದ ಬೆನ್ನಲ್ಲೇ ಶಶಿ ತರೂರ್ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.
ಕಾಂಗ್ರೆಸ್‌ನ ಆರು ಸಂಸದರು, ಟಿಎಂಸಿಯ ಇಬ್ಬರು ಸಂಸದರು, ಶಿವಸೇನಾ, ಸಿಪಿಎಂ ಮತ್ತು ಸಿಪಿಐನ ತಲಾ ಒಬ್ಬ ಸಂಸದರನ್ನು ಅಮಾನತ್ತು ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.